ADVERTISEMENT

ಭಾರತ ಹಿಂದೂ ರಾಷ್ಟ್ರ: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 19:50 IST
Last Updated 25 ಫೆಬ್ರುವರಿ 2019, 19:50 IST
   

ನವದೆಹಲಿ: 1947ರಲ್ಲಿ ದೇಶ ವಿಭಜನೆ ಆದಾಗಲೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಿತ್ತು ಎಂದು ಮೇಘಾಲಯ ಹೈಕೋರ್ಟ್‌ನ ನ್ಯಾಯಮೂರ್ತಿ ಸುದೀಪ್‌ ರಂಜನ್‌ ಸೆನ್‌ ಅವರು ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

‘ವಿಭಜನೆಗೊಂಡ ಪಾಕಿಸ್ತಾನ ತನ್ನನ್ನು ಮುಸ್ಲಿಂ ರಾಷ್ಟ್ರವಾಗಿ ಘೋಷಿಸಿಕೊಂಡಿತು. ಧರ್ಮದ ಆಧಾರದಲ್ಲಿ ವಿಭಜನೆಯಾದ ಭಾರತ ಕೂಡ ತನ್ನನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಿಕೊಳ್ಳಬೇಕಿತ್ತು. ಆದರೆ, ಈ ದೇಶ ಜಾತ್ಯತೀತವಾಗಿ ಉಳಿಯಿತು.

‘ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಹಿಂದೂ, ಸಿಖ್‌, ಜೈನ, ಬೌದ್ಧ, ಕ್ರೈಸ್ತ, ಪಾರ್ಸಿ, ಖಾಸಿ, ಜೈಂತಿಯಾ ಮತ್ತು ಗಾರೋ ಸಮುದಾಯಗಳ ಜನರು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಇವರಿಗೆ ಹೋಗಲು ಬೇರೆ ಜಾಗವೇ ಇಲ್ಲ. ದೇಶ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದ ಹಿಂದೂಗಳನ್ನು ಈಗಲೂ ವಿದೇಶಿಯರೆಂದೇ ಪರಿಗಣಿಸಲಾಗುತ್ತಿದೆ. ಇದು ಅತಾರ್ಕಿಕ, ಕಾನೂನುಬಾಹಿರ ಮತ್ತು ಸಹಜ ನ್ಯಾಯಕ್ಕೆ ವಿರುದ್ಧ’ ಎಂದು ಸೆನ್‌ ಅವರು ತೀರ್ಪು ನೀಡಿದ್ದರು.

ADVERTISEMENT

ಈ ತೀರ್ಪನ್ನು ಪ್ರಶ್ನಿಸಿ ಸೋನಾ ಖಾನ್‌, ಕೆ.ಪಿ. ಫ್ಯಾಬಿಯನ್‌, ಪ್ರೊ. ಅತುಲ್‌ ಶರ್ಮಾ, ಕಡ್ಯನ್‌ ಸುಬ್ರಮಣ್ಯನ್‌, ಸುಹಾಸ್‌ ಬೋರ್ಕರ್‌, ಪಾರ್ಥ ಚಟರ್ಜಿ ಮತ್ತು ಪ್ರೊ. ಇಮ್ತಿಯಾಜ್‌ ಅಹ್ಮದ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಅರ್ಜಿಯ ವಿಚಾರಣೆಗೆ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.