ADVERTISEMENT

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2023, 4:09 IST
Last Updated 23 ಸೆಪ್ಟೆಂಬರ್ 2023, 4:09 IST
<div class="paragraphs"><p>ಭಾರತದ ಕಾರ್ಯದರ್ಶಿ ಪೆಟಲ್ ಗೆಹಲೋತ್‌ (ಒಳಚಿತ್ರದಲ್ಲಿ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್‌ ಕಾಕರ್‌)</p></div>

ಭಾರತದ ಕಾರ್ಯದರ್ಶಿ ಪೆಟಲ್ ಗೆಹಲೋತ್‌ (ಒಳಚಿತ್ರದಲ್ಲಿ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್‌ ಕಾಕರ್‌)

   

ಚಿತ್ರಕೃಪೆ: ಟ್ವಿಟರ್‌ ಹಾಗೂ ಪಿಟಿಐ

ವಿಶ್ವಸಂಸ್ಥೆ: ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವರ್ ಉಲ್ ಹಕ್‌ ಕಾಕರ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಜಮ್ಮು–ಕಾಶ್ಮಿರ ವಿಷಯ ಪ್ರಸ್ತಾಪಿಸಿರುವುದಕ್ಕೆ ಭಾರತ ತಿರುಗೇಟು ನೀಡಿದೆ.

ADVERTISEMENT

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 78ನೇ ಅಧಿವೇಶನ ಉದ್ದೇಶಿಸಿ ಶುಕ್ರವಾರ ಮಾತನಾಡಿದ್ದ ಕಾಕರ್, 'ಭಾರತ– ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿಷಯವೇ ನಿರ್ಣಾಯಕವಾದುದು' ಎಂದು ಪ್ರತಿಪಾದಿಸಿದ್ದರು.

ವಿಶ್ವಸಂಸ್ಥೆಯಲ್ಲಿನ ಭಾರತದ ಕಾರ್ಯದರ್ಶಿ ಪೆಟಲ್ ಗೆಹಲೋತ್‌ ಅವರು ಕಾಕರ್‌ಗೆ ತಿರುಗೇಟು ನೀಡಿದ್ದಾರೆ. 'ಪಾಕಿಸ್ತಾನವು ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಆಧಾರರಹಿತ ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡುವ ತನ್ನ ಹಳೇ ಚಾಳಿ ಮುಂದುವರಿಸಿದೆ' ಎಂದಿದ್ದಾರೆ.‌

'ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರದಲ್ಲಿ ತಾನು ಹೊಂದಿರುವ ಹೀನಾಯ ದಾಖಲೆಯಿಂದ ಬೇರೆಡೆಗೆ ಗಮನ ಸೆಳೆಯುವ ಸಲುವಾಗಿ ಪಾಕಿಸ್ತಾನ ಹೀಗೆ ಮಾಡುತ್ತಿದೆ ಎಂಬುದು ಬಗ್ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ಇತರ ಬಹುರಾಷ್ಟ್ರೀಯ ಸಂಘಟನೆಗಳಿಗೆ ಚೆನ್ನಾಗಿ ಗೊತ್ತಿದೆ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಭಾರತದ ಅವಿಭಾಜ್ಯ ಅಂಗ ಎಂದು ನಾವು ಮೊತ್ತೊಮ್ಮೆ ಪುನರುಚ್ಚರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಸಂಬಂಧಿಸಿದ ವಿಚಾರಗಳು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರಗಳು. ನಮ್ಮ ದೇಶೀಯ ವಿಚಾರದ ಬಗ್ಗೆ ಹೇಳಿಕೆ ನೀಡಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ' ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

'ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಬೇಕಾದರೆ ಪಾಕಿಸ್ತಾನ ಮೂರು ಕ್ರಮಗಳನ್ನು ಕೈಗೊಳ್ಳಬೇಕು. ಮೊದಲನೆಯದು, ಗಡಿಯಾಚೆಗಿನ ಉಗ್ರ ಚಟುವಟಿಕೆಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು ಹಾಗೂ ಭಯೋತ್ಪಾದಕರಿಗೆ ಮೂಲಸೌಕರ್ಯ ಕಲ್ಪಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಎರಡನೆಯದಾಗಿ, ಅಕ್ರಮವಾಗಿ ಮತ್ತು ಒತ್ತಾಯಪೂರ್ವಕವಾಗಿ ಅತಿಕ್ರಮಣ ಮಾಡಿರುವ ಭಾರತದ ಭೂಪ್ರದೇಶದಿಂದ ಹೊರನಡೆಯಬೇಕು. ಮೂರನೇಯದು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕೊನೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.

ಸಭೆಯ ಕಾರ್ಯಸೂಚಿ ಯಾವುದೇ ಇರಲಿ, ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಅಂತರರಾಷ್ಟ್ರೀಯ ಮಟ್ಟದ್ದಾಗಿಸಲು ಪಾಕಿಸ್ತಾನವು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಪ್ರಯತ್ನಿಸುತ್ತಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.