ನವದೆಹಲಿ: ಇಂಡೊನೇಷ್ಯಾ ಜೊತೆಗೆ ರಕ್ಷಣಾ ಸಾಧನಗಳ ಉತ್ಪಾದನೆ ಹಾಗೂ ಅವುಗಳ ಪೂರೈಕೆ ವಿಚಾರದಲ್ಲಿ ಸಂಬಂಧ ವೃದ್ಧಿಸಲು ಭಾರತ ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯ ಕರ್ತವ್ಯಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಇಂಡೊನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
‘ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಅಸಿಯಾನ್)ದಲ್ಲಿನ ದೇಶಗಳಲ್ಲಿ ಇಂಡೊನೇಷ್ಯಾವು ಭಾರತದ ಪ್ರಮುಖ ಪಾಲುದಾರ ಎನಿಸಿಕೊಂಡಿದೆ. ಈಗಾಗಲೇ ಇಂಡೊ–ಫೆಸಿಫಿಕ್ ಭಾಗದಲ್ಲಿ ಕಾನೂನಿಗೆ ಬದ್ಧವಾಗಿರಲು ಎರಡೂ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಸಲಾಗಿದೆ. ರಕ್ಷಣಾ ಪರಿಕರಗಳ ಉತ್ಪಾದನೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ, ಎರಡೂ ರಾಷ್ಟ್ರಗಳು ಜೊತಗೂಡಿ ಕೆಲಸ ಮಾಡಲು ಸಮ್ಮತಿಸಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
‘ಜಲಮಾರ್ಗ ಭದ್ರತೆ, ಸೈಬರ್ ಸುರಕ್ಷತೆ, ಭಯೋತ್ಪಾದನೆ ನಿಗ್ರಹ ಹಾಗೂ ಮೂಲಭೂತವಾದ ತಡೆಯುವ ನಿಟ್ಟಿನಲ್ಲಿ ಜೊತೆಗೂಡಿ ಕೆಲಸ ಮಾಡಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ. ಫಿನ್‌ಟೆಕ್, ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್ ಹಾಗೂ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ಬಲಪಡಿಸುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಬ್ರಿಕ್ಸ್ ರಾಷ್ಟ್ರಗಳ ಸದಸ್ಯತ್ವ ಪಡೆಯುವ ಇಂಡೊನೇಷ್ಯಾದ ನಿರ್ಧಾರವನ್ನು ಭಾರತವು ಸ್ವಾಗತಿಸಿದೆ.
ಪ್ರಮುಖ ಆದ್ಯತಾ ವಲಯಗಳಲ್ಲಿ ಎರಡೂ ರಾಷ್ಟ್ರಗಳ ಹಿತಕಾಯಲು ಸಂಬಂಧವೃದ್ಧಿಗಾಗಿ ತ್ವರಿತ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.-ಪ್ರಬೊವೊ ಸುಬಿಯಾಂತೊ, ಇಂಡೊನೇಷ್ಯಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.