ADVERTISEMENT

ಶಾಯರಿಗಳ ನಾಡಿನಲ್ಲಿ ನಾಳೆಯಿಂದ ವಿಜ್ಞಾನದ ‘ಕುಂಭ ಮೇಳ ’

ಲಕ್ಷ ಮಕ್ಕಳಿಗೆ ದೇಶದ ಪ್ರತಿಷ್ಠಿತ ವಿಜ್ಞಾನ ಪ್ರಯೋಗಾಲಯಗಳ ಪರಿಚಯ

ಎಸ್.ರವಿಪ್ರಕಾಶ್
Published 4 ಅಕ್ಟೋಬರ್ 2018, 15:46 IST
Last Updated 4 ಅಕ್ಟೋಬರ್ 2018, 15:46 IST
   

ಲಖನೌ: ಉತ್ತರ ಪ್ರದೇಶ ಅರ್ಧ, ಮಹಾ ಕುಂಭ ಮೇಳಗಳ ನಾಡು ಎಂದೇ ಖ್ಯಾತಿ ಪಡೆದಿದೆ. ಇಲ್ಲಿನ ರಾಜಧಾನಿ ಲಖನೌನಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ವಿಜ್ಞಾನದ ‘ಮಿನಿ ಕುಂಭ ಮೇಳ’ವೇ ನಡೆಯಲಿದೆ.

ದೇಶ– ವಿದೇಶಗಳಿಂದ ಸುಮಾರು 10,000 ಕ್ಕೂ ಹೆಚ್ಚು ವಿಜ್ಞಾನ ಆಸಕ್ತ ವಿದ್ಯಾರ್ಥಿಗಳು, ವಿಜ್ಞಾನಿಗಳು, ಅಧ್ಯಾಪಕರು ಮತ್ತು ಉದ್ಯಮಿಗಳು ಗುರುವಾರವೇ ಬೀಡು ಬಿಟ್ಟಿದ್ದಾರೆ. ಕೇಸರಿ ಬಣ್ಣದ ಕಟ್ಟಡಗಳಿಂದ ಕಂಗೊಳಿಸುವ ಈ ನಗರದಲ್ಲಿ ಈಗ ವಿಜ್ಞಾನದ ಗುಂಗು ಆವರಿಸಿದೆ. ಎಲ್ಲೆಲ್ಲೂ ವಿಜ್ಞಾನದ ಉತ್ಸವವನ್ನು ಬಿಂಬಿಸುವ ಹೋರ್ಡಿಂಗ್‌ಗಳು ರಾರಾಜಿಸುತ್ತಿವೆ.

ವಿಜ್ಞಾನದ ಮಾದರಿಗಳು, ಚಾರ್ಟ್‌ಗಳು, ಬಾಹ್ಯಾಕಾಶ ನೌಕೆ ಮತ್ತು ಉಪಗ್ರಹಗಳ ಮಾದರಿಗಳು, ಕೃಷಿ ಆವಿಷ್ಕಾರದ ಹೊಸ ಉಪಕರಣಗಳು ಲಖನೌ ನಗರಕ್ಕೆ ಹರಿದುಬಂದಿರುವುದನ್ನು ಇಲ್ಲಿನ ಜನ ಬೆರಗುಗಣ್ಣುಗಳಿಂದ ವೀಕ್ಷಿಸಿದರು. ಶಾಯರಿ ಮತ್ತು ಸಿಹಿ ತಿನಿಸಿಗೆ ಹೆಸರಾದ ಈ ನಗರಕ್ಕೆ ವಿಜ್ಞಾನದ ರಂಗು ನೀಡಲು ಉತ್ತರಪ್ರದೇಶ ಸರ್ಕಾರ ಶಕ್ತಿ ಮೀರಿ ಯತ್ನಿಸಿದೆ.

ADVERTISEMENT

ನಗರದ ಕಡೆಗಳಲ್ಲಿ 23 ವಿಜ್ಞಾನದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇದರ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿರುವುದರಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ವಿಜ್ಞಾನ ಮೇಳದ ಅಂತಿಮ ಸಿದ್ಧತೆಯನ್ನು ಗುರುವಾರ ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ವೀಕ್ಷಿಸಿದರು.

ದೇಶದ ಪ್ರತಿಷ್ಠಿತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಇಸ್ರೊ, ಡಿಆರ್‌ಡಿಒ, ಸಿಎಸ್‌ಐಆರ್‌ 25 ರಿಂದ 30 ಸಂಸ್ಥೆಗಳು ತಮ್ಮ ಇತ್ತೀಚಿನ ಸಂಶೋಧನೆಗಳು ಮತ್ತು ಸಾಧನೆಗಳ ಪ್ರದರ್ಶನವನ್ನು ಏರ್ಪಡಿಸಿವೆ.

ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಗಾಲಯಗಳ ಭೇಟಿ:ಪ್ರತಿವರ್ಷ ಒಂದು ಲಕ್ಷ ಗ್ರಾಮೀಣ ವಿದ್ಯಾರ್ಥಿಗಳಿಗೆ ದೇಶದ ಪ್ರತಿಷ್ಠಿತ ವಿಜ್ಞಾನದ ಪ್ರಯೋಗಾಲಯಗಳಲ್ಲಿ ನಾಲ್ಕು ವಾರಗಳ ಕಾಲ ಉಳಿಸಿ, ವಿಜ್ಞಾನದ ಪ್ರಯೋಗಗಳ ನೇರ ಪರಿಚಯ ಮಾಡಿಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್‌ ಹೇಳಿದರು.

4 ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದ ಮುನ್ನಾ ದಿನವಾದ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 2022 ರ ವೇಳೆಗೆ ಪ್ರತಿ ಗ್ರಾಮಗಳ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಜನಾಂದೋಲನವನ್ನೇ ಹಮ್ಮಿಕೊಳ್ಳಲಾಗುವುದು ಎಂದರು.

ದೇಶದ ವಿಜ್ಞಾನ ಆಸಕ್ತ ಮಕ್ಕಳನ್ನು ಆಯ್ಕೆ ಮಾಡಿ ವಿವಿಧ ಪ್ರತಿಷ್ಠಿತ ಪ್ರಯೋಗಾಲಯಗಳಿಗೆ ಕಳಿಸಲಾಗುವುದು. ಅಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಕಣ್ಣಾರೆ ಕಂಡು, ವಿಜ್ಞಾನಿಗಳಿಂದ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗುವುದು.ಇದರಿಂದ ವಿದ್ಯಾರ್ಥಿಗಳಲ್ಲಿ ಎಳೆಯ ಪ್ರಾಯದಲ್ಲೇ ವಿಜ್ಞಾನದ ಬಗ್ಗೆ ಆಸಕ್ತಿಯ ಕಿಡಿ ಹೊತ್ತಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ವಿಜ್ಞಾನದಿಂದ ಮಾತ್ರ ಪರಿಹಾರ ಸಾಧ್ಯ. ಇದನ್ನು ಸಾಧ್ಯವಾಗಿಸಲು ಯುವ ಮನಸ್ಸುಗಳನ್ನು ಸಿದ್ಧಗೊಳಿಸಬೇಕು ಎಂದರು.

ಕರ್ನಾಟಕದ30 ವಿದ್ಯಾರ್ಥಿಗಳು

ಕರ್ನಾಟಕದ ಶಾಲಾ–ಕಾಲೇಜುಗಳ 30 ವಿದ್ಯಾರ್ಥಿಗಳು ಮತ್ತು ಇಸ್ರೊ, ಡಿಆರ್‌ಡಿಒ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳೂ ಈ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.