ADVERTISEMENT

ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪಾತ್ರ ಮುಖ್ಯ: ಡಾನ್ ಹೆಫ್ಲಿನ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 16:35 IST
Last Updated 2 ಫೆಬ್ರುವರಿ 2021, 16:35 IST
ಕೆಲ್ಲಿ ಎಲ್. ಸೀಬೋಲ್ಟ್, ಡಾನ್ ಹೆಫ್ಲಿನ್ ಮತ್ತು ಲೆಫ್ಟಿನೆಂಟ್ ಜನರಲ್ ಡೇವಿಡ್ ಎ. ಕ್ರಮ್‌ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಕೆಲ್ಲಿ ಎಲ್. ಸೀಬೋಲ್ಟ್, ಡಾನ್ ಹೆಫ್ಲಿನ್ ಮತ್ತು ಲೆಫ್ಟಿನೆಂಟ್ ಜನರಲ್ ಡೇವಿಡ್ ಎ. ಕ್ರಮ್‌ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.   

ಬೆಂಗಳೂರು: ‘ಇಂಡೊ– ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ಅಮೆರಿಕ ಮತ್ತು ಭಾರತದ ನಡುವಿನ ಸಹಕಾರವು, ಎಲ್ಲ ದೇಶಗಳ ಭದ್ರತೆ ಹಾಗೂ ಸಮೃದ್ಧಿಯನ್ನು ಸಾಧಿಸುವ ವ್ಯವಸ್ಥೆಯ ಪರವಾಗಿರುವ ನಿಲುವನ್ನು ಗಟ್ಟಿಗೊಳಿಸುವಂತೆ ಇದೆ’ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಡಾನ್ ಹೆಫ್ಲಿನ್‌ ಹೇಳಿದರು.

ಏರೊ ಇಂಡಿಯಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕ ಮತ್ತು ಭಾರತದ ರಕ್ಷಣಾ ಕಂಪನಿಗಳ ನಡುವೆ ಪಾಲುದಾರಿಕೆ ಹೆಚ್ಚುತ್ತಿದೆ. ಇದು ಭಾರತದಲ್ಲಿ ರಕ್ಷಣಾ ಸಾಮಗ್ರಿಗಳ ಪೂರೈಕೆದಾರರ ಜಾಲವನ್ನು ಬಲಪಡಿಸುವಂತೆ ಇದೆ. ಇಂಡೊ–ಪ್ಯಾಸಿಫಿಕ್ ಪ್ರದೇಶದಲ್ಲಿ ನಮ್ಮ ಜೊತೆಗಾರ ದೇಶಗಳ ಕೈ ಬಲಪಡಿಸುವಂತೆಯೂ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಮೆರಿಕದ ವಾಯುಪಡೆಯ ಅಂತರರಾಷ್ಟ್ರೀಯ ವ್ಯವಹಾರಗಳ ಉಪ ಅಧೀನ ಕಾರ್ಯದರ್ಶಿ ಕೆಲ್ಲಿ ಎಲ್. ಸೀಬೋಲ್ಟ್ ಅವರೂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ‘ಇಂಡೊ–ಪ್ಯಾಸಿಫಿಕ್ ಪ್ರದೇಶದಲ್ಲಿ ಭಾರತವು ನಮ್ಮ ಪಾಲಿನ ಮುಂಚೂಣಿ ರಕ್ಷಣಾ ಪಾಲುದಾರ ದೇಶ’ ಎಂದು ಕೆಲ್ಲಿ ಬಣ್ಣಿಸಿದರು.

ADVERTISEMENT

‘ಸಮರಾಭ್ಯಾಸ, ಪರಸ್ಪರ ಸಹಕಾರ ಒಪ್ಪಂದಗಳು, ಭಾರತದ ಸಶಸ್ತ್ರ ಪಡೆಗಳಿಗೆ ಅಮೆರಿಕದ ಸುಧಾರಿತ ರಕ್ಷಣಾ ಉಪಕರಣಗಳನ್ನು ಪೂರೈಸುವ ಮೂಲಕ ನಾವು ಈ ರಕ್ಷಣಾ ಸಂಬಂಧವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಕೆಲ್ಲಿ ಹೇಳಿದರು.

ಇದೇ ಮೊದಲು: ಅಮೆರಿಕದ ವಾಯುಪಡೆಗೆ ಸೇರಿದ ಬಿ–1ಬಿ ಲ್ಯಾನ್ಸರ್‌ ಸೂಪರ್‌ಸಾನಿಕ್‌ ಯುದ್ಧ ವಿಮಾನಗಳು ಈ ಬಾರಿಯ ಏರೊ ಇಂಡಿಯಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇಳೆ ಕಸರತ್ತು ಪ್ರದರ್ಶಿಸಲಿವೆ.

‘ಬಾಂಬ್ ದಾಳಿಗೆ ಹೆಸರಾದ ಅಮೆರಿಕದ ವಾಯುಪಡೆಯ ಯುದ್ಧ ವಿಮಾನವೊಂದು ಭಾರತಕ್ಕೆ ಬಂದಿರುವುದು ಇದೇ ಮೊದಲು’ ಎಂದು ಚೆನ್ನೈನ ಅಮೆರಿಕದ ಕಾನ್ಸುಲ್ ಜನರಲ್ ಕಚೇರಿಯ ಪ್ರಕಟಣೆ ಹೇಳಿದೆ.

ಬಿ–1ಬಿ ಲ್ಯಾನ್ಸರ್‌ ಯುದ್ಧ ವಿಮಾನಗಳು ಅಮೆರಿಕದ ವಾಯು ನೆಲೆಗಳಿಂದಲೇ ಜಗತ್ತಿನಾದ್ಯಂತ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಈ ಯುದ್ಧ ವಿಮಾನಗಳನ್ನು ಅಮೆರಿಕದ ದೂರಗಾಮಿ ಯುದ್ಧ ವಿಮಾನ ದಳದ ಬೆನ್ನೆಲೆಬು ಎಂದೂ ಹೇಳಲಾಗುತ್ತದೆ. ಅಮೆರಿಕದ ಉನ್ನತ ಅಧಿಕಾರಿಗಳ ನಿಯೋಗವೊಂದು ಏರೊ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.