ADVERTISEMENT

5ಜಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ: ಭಾರತ–ಜಪಾನ್‌ ಒಪ್ಪಂದ

ಪಿಟಿಐ
Published 7 ಅಕ್ಟೋಬರ್ 2020, 14:52 IST
Last Updated 7 ಅಕ್ಟೋಬರ್ 2020, 14:52 IST
ಜೈಶಂಕರ್‌
ಜೈಶಂಕರ್‌   

ನವದೆಹಲಿ: 5ಜಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಇತರೆ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಮಹತ್ವಾಕಾಂಕ್ಷೆಯ ಒಪ್ಪಂದವನ್ನು ಭಾರತ ಹಾಗೂ ಜಪಾನ್‌ ಬುಧವಾರ ಮಾಡಿಕೊಂಡಿವೆ.

ವಿಶ್ವದ ಹಲವು ರಾಷ್ಟ್ರಗಳು ಚೀನಾ ಮೂಲದ ‘ಹುವಾಯಿ’ ಕಂಪನಿಯ 5ಜಿ ತಂತ್ರಜ್ಞಾನವನ್ನು ತಮಲ್ಲಿ ಅಳವಡಿಸಿಕೊಳ್ಳಲು ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ಭಾರತವು ಈ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಪಾನ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಭದ್ರತೆ ದೃಷ್ಟಿಯಿಂದ ಹುವಾಯಿ ಕಂಪನಿಯನ್ನು ನಿಷೇಧಿಸಿರುವ ಅಮೆರಿಕ, ಇತರೆ ರಾಷ್ಟ್ರಗಳೂ ಚೀನಾ ಕಂಪನಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಂತೆ ಸಲಹೆ ನೀಡಿದೆ.

‘ಕ್ವಾಡ್‌’ ರಾಷ್ಟ್ರಗಳ ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸಲು ಟೋಕಿಯೊಗೆ ತೆರಳಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು, ಬುಧವಾರಜಪಾನ್‌ನ ವಿದೇಶಾಂಗ ಸಚಿವ ಟೊಶಿಮಿಸು ಮೊಟೆಗಿ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ‘ಇಂಡೊ–ಪೆಸಿಫಿಕ್‌ ಓಷಿಯನ್ಸ್‌ ಇನಿಷಿಯೇಟಿವ್‌’ಗೆ(ಐಪಿಒಐ) ಮುಖ್ಯ ಪಾಲುದಾರ ರಾಷ್ಟ್ರವಾಗಲು ಜಪಾನ್‌ ಒಪ್ಪಿಕೊಂಡಿದೆ. ಇಂಡೊ–ಪೆಸಿಫಿಕ್‌ ಭಾಗದಲ್ಲಿ ಚೀನಾ ತನ್ನ ಸೇನಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಈ ಭಾಗದಲ್ಲಿ ಸುರಕ್ಷಿತ ವಲಯವನ್ನು ನಿರ್ಮಿಸುವುದು ಐಪಿಒಐನ ಮುಖ್ಯ ಉದ್ದೇಶವಾಗಿದೆ.

ADVERTISEMENT

‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ಮತ್ತು ಜಪಾನ್‌ನ ಸಹಯೋಗವನ್ನು ಮತ್ತಷ್ಟು ವಿಸ್ತರಿಸುವ ಕುರಿತೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಟ್ವೀಟ್ ಮೂಲಕ ಜೈಶಂಕರ್‌ ತಿಳಿಸಿದ್ದಾರೆ.

‘ಪ್ರಸ್ತುತ, ಡಿಜಿಟಲ್‌ ತಂತ್ರಜ್ಞಾನವು ಎಲ್ಲೆಡೆ ವ್ಯಾಪಿಸಿದ್ದು, ಸದೃಢವಾದ ಹಾಗೂ ಸುರಕ್ಷಿತ ಡಿಜಿಟಲ್‌ ಮತ್ತು ಸೈಬರ್‌ ವ್ಯವಸ್ಥೆಯ ಅಗತ್ಯತೆ ಇದೆ. ಈ ಕುರಿತ ಸೈಬರ್‌ ಸುರಕ್ಷತೆ ಒಪ್ಪಂದವನ್ನೂ ಸಭೆಯಲ್ಲಿ ಅಂತಿಮಗೊಳಸಿಲಾಯಿತು’ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.