ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಮತ್ತು ಸದಸ್ಯತ್ವ ಪಡೆಯುವುದಕ್ಕೆ ದಶಕಗಳ ಹಿಂದೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.
ಈ ಸಂಬಂಧ ಸರ್ಕಾರ ಜುಲೈ 9ರಂದೇ ಹೊರಡಿಸಿದ್ದ ಜ್ಞಾಪನಾ ಪತ್ರ ಸೋಮವಾರ ಬಹಿರಂಗವಾಗಿದೆ.
ಭಾರತೀಯ ಸೇವಾ ನಿಯಮವು 1966ರಿಂದ ಸರ್ಕಾರಿ ಸಿಬ್ಬಂದಿಗೆ ಆರ್‌ಎಸ್‌ಎಸ್ ಮತ್ತು ‘ಜಮಾತ್–ಎ–ಇಸ್ಲಾಮಿ’ ಸಂಘಟನೆಗಳ ಸದಸ್ಯತ್ವ ಪಡೆಯುವುದು ಮತ್ತು ಅವುಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿತ್ತು.
ಆರ್‌ಎಸ್‌ಎಸ್ ಸದಸ್ಯತ್ವಕ್ಕೆ ಸಂಬಂಧಿಸಿದ ನಿಷೇಧವನ್ನು ತೆರವುಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಜ್ಞಾಪನಾ ಪತ್ರವನ್ನು ಬಿಜೆಪಿಯ ಐ.ಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯಾ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘58 ವರ್ಷಗಳ ಹಿಂದೆ ಅಸಾಂವಿಧಾನಿಕವಾಗಿ ಹೊರಡಿಸಲಾಗಿದ್ದ ಆದೇಶವನ್ನು ಈ ಮೂಲಕ ತೆರವುಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಆದರೆ ಸರ್ಕಾರದ ಜ್ಞಾಪನಾ ಪತ್ರದಲ್ಲಿ ‘ಜಮಾತ್–ಎ–ಇಸ್ಲಾಮಿ’ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಸೇರಿದಂತೆ ಮೂರು ಸಂದರ್ಭಗಳಲ್ಲಿ ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿತ್ತು.
ದೇಶವು ಧರ್ಮ ನಿರಪೇಕ್ಷ ಎಂಬುದರ ಬದಲಿಗೆ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂಬುದು ಆರ್‌ಎಸ್‌ಎಸ್ ಪ್ರತಿಪಾದನೆಯಾಗಿದೆ. ಇದು ದೇಶವನ್ನು ಪಂಥೀಯವಾಗಿ ವಿಭಜಿಸುವ ಉದ್ದೇಶ ಹೊಂದಿದೆ ಎಂಬುದು ವಿಮರ್ಶಕರ ಆರೋಪವಾಗಿದೆ.
ಆರ್‌ಎಸ್‌ಎಸ್‌ನ ಪ್ರತಿಯೊಬ್ಬರು ಹಿಂದುತ್ವದ ಮೇಲೆ ಪ್ರತಿಜ್ಞೆ ಮಾಡುತ್ತಾರೆ. ಅವರಿಗೆ ದೇಶಕ್ಕಿಂತ ಹಿಂದುತ್ವವೇ ಮೊದಲು. ಹೀಗಿರುವಾಗ ಆರ್‌ಎಸ್‌ಎಸ್‌ನ ಸದಸ್ಯತ್ವನ್ನು ಪಡೆಯುವ ಸರ್ಕಾರಿ ಸಿಬ್ಬಂದಿ ದೇಶಕ್ಕೆ ಹೇಗೆ ನಿಷ್ಠರಾಗಿರುತ್ತಾರೆ.
-ಅಸಾದುದ್ದೀನ್ ಓವೈಸಿ ಎಐಎಂಐಎಂ ಅಧ್ಯಕ್ಷ
ನೌಕರರ ತಟಸ್ಥ ನಿಲುವಿಗೆ ಸವಾಲು: ಖರ್ಗೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ನೌಕರರನ್ನು ಸಿದ್ಧಾಂತದ ಆಧಾರದ ಮೇಲೆ ವಿಭಜಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಇದು ಸಾರ್ವಜನಿಕ ಸೇವಕರು ತಟಸ್ಥ ನಿಲುವಿನೊಂದಿಗೆ ಕೆಲಸ ಮಾಡುವುದಕ್ಕೆ ಸವಾಲೊಡ್ಡುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ‘ದೇಶವು 1947ರಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡಾಗ ಆರ್‌ಎಸ್‌ಎಸ್ ವಿರೋಧಿಸಿತ್ತು. ಆಗ ಸರ್ದಾರ್ ವಲ್ಲಭಭಾಯಿ ಪಟೇಲರು ಆರ್‌ಎಸ್‌ಎಸ್‌ಗೆ ಎಚ್ಚರಿಕೆ ನೀಡಿದ್ದರು. 1948ರ ಫೆಬ್ರುವರಿ 4ರಂದು ಗಾಂಧೀಜಿ ಅವರ ಹತ್ಯೆಯಾದ ಬಳಿಕ ಪಟೇಲರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. 1966ರಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸರ್ಕಾರಿ ನೌಕರರ ವಿರುದ್ಧ ಹೇರಲಾಗಿದ್ದ ನಿಷೇಧವನ್ನು 58 ವರ್ಷಗಳ ಬಳಿಕ ಮೋದಿ ಅವರು ತೆರವುಗೊಳಿಸಿದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ. ‘ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಸಾಂಸ್ಥಿಕವಾಗಿ ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೇಗೆ ಕೆಲಸ ಮಾಡುತ್ತಿವೆ ಎಂಬುದು ತಿಳಿದಿದೆ. ಇದೀಗ ಮೋದಿ ಅವರು ಸರ್ಕಾರಿ ಕಚೇರಿಗಳನ್ನು ರಾಜಕೀಯಗೊಳಿಸಿದ್ದಾರೆಡ ಮತ್ತು ನೌಕರರು ಒಂದು ಸಿದ್ಧಾಂತರ ಪರವಾಗಿ ಇರುವಂತೆ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ. ‘ದೇಶದ ಸಂವಿಧಾನವನ್ನು ಬದಲಿಸಬೇಕು ಎಂಬ ತನ್ನ ನೀಚ ಉದ್ದೇಶವನ್ನು ಚನಾವಣೆಯಲ್ಲಿ ಜನರು ತಿರಸ್ಕರಿಸಿದ್ದರಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿರಬಹುದು’ ಎಂದು ಅವರು ಹೇಳಿದ್ದಾರೆ. ‘ಆರ್‌ಎಸ್‌ಎಸ್ ವಿರುದ್ಧ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವ ಸಂದರ್ಭದಲ್ಲಿ ತಾನು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಸಾಮಾಜಿಕ ಸಂಘಟನೆಯಾಗಿ ಮುಂದುವರಿಯುತ್ತೇನೆ. ರಾಜಕೀಯ ಉದ್ದೇಶ ಹೊಂದಿರುವುದಿಲ್ಲ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಭರವಸೆ ನೀಡಿ ಕ್ಷಮೆ ಕೋರಿತ್ತು. ಸರ್ಕಾರ ಈಗ ಕೈಗೊಂಡಿರುವ ಕ್ರಮವು ಅದರ ಉಲ್ಲಂಘನೆಯಾಗಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.
- ಬಿಜೆಪಿ ಆರ್‌ಎಸ್‌ಎಸ್ ಸ್ವಾಗತ
ನವದೆಹಲಿ (ಪಿಟಿಐ): ಸರ್ಕಾರಿ ನೌಕರರಿಗೆ ಆರ್‌ಎಸ್‌ಎಸ್ ಸದಸ್ಯತ್ವ ಪಡೆಯಲು ಹೇರಲಾಗಿದ್ದ ನಿಷೇಧವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸ್ವಾಗತಿಸಿದ್ದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಹೇಳಿವೆ. ಹಿಂದೆ ಆಡಳಿತ ನಡೆಸಿದವರು ನಿಷೇಧ ಹೇರುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಯ್ದುಕೊಂಡಿದ್ದರು ಎಂದು ಅವು ಆರೋಪಿಸಿವೆ. ‘1966ರಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿಷೇಧಿಸಿತ್ತು’ ಎಂದು ಕೇಂದ್ರ ಸಚಿವ ಪಿಯುಷ್ ಗೋಯಲ್ ಟೀಕಿಸಿದರು. ಪ್ರಜಾಪ್ರಭುತ್ವ ಬಲಪಡಿಸುತ್ತದೆ: ‘ಕೇಂದ್ರ ಸರ್ಕಾರದ ನಿರ್ಧಾರ ಸೂಕ್ತವಾಗಿದ್ದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ’ ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರ್‌ಎಸ್‌ಎಸ್ 99 ವರ್ಷಗಳಿಂದ ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ ಏಕತೆ ಸಮಗ್ರತೆಗೆ ಸಂಘ ತನ್ನದೇ ಆದ ಕೊಡುಗೆ ನೀಡಿದೆ. ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸಮಾಜದ ಜತೆಯಲ್ಲಿದ್ದು ಕಾರ್ಯನಿರ್ವಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.