ADVERTISEMENT

ದೇಶದಲ್ಲಿ ಈ ಬಾರಿ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ: ಐಎಂಡಿ

ಪಿಟಿಐ
Published 15 ಏಪ್ರಿಲ್ 2024, 12:06 IST
Last Updated 15 ಏಪ್ರಿಲ್ 2024, 12:06 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಲಾ ನಿನಾ ಪರಿಸ್ಥಿತಿಯು ಅನುಕೂಲಕರ ಆಗಿರುವುದರ ಕಾರಣ ದೇಶದಲ್ಲಿ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ದೇಶದಲ್ಲಿ ಈ ಬಾರಿ ಮುಂಗಾರು ಮಳೆಯು ದೀರ್ಘಾವಧಿ ಸರಾಸರಿಯಾದ 87 ಸೆಂಟಿ ಮೀಟರ್‌ಗಿಂತ ಹೆಚ್ಚಿರಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ದೇಶದ ಹಲವು ಭಾಗಗಳಲ್ಲಿ ಈಗ ತೀವ್ರ ಸೆಕೆಯ ವಾತಾವರಣ ಇದೆ. ಏಪ್ರಿಲ್‌ನಿಂದ ಜೂನ್‌ ಅವಧಿಯಲ್ಲಿ ಬಿಸಿಗಾಳಿಯ ದಿನಗಳು ಗಣನೀಯವಾಗಿ ಹೆಚ್ಚಿರಲಿವೆ ಎಂದು ನಿರೀಕ್ಷಿಸಲಾಗಿದೆ. ಇದರಿಂದಾಗಿ ವಿದ್ಯುತ್ ಜಾಲದ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಗಬಹುದು; ದೇಶದ ಹಲವು ಭಾಗಗಳಲ್ಲಿ ನೀರಿನ ಅಭಾವ ಹೆಚ್ಚುವ ಸಾಧ್ಯತೆ ಇದೆ.

ದೇಶದ ಕೃಷಿ ಚಟುವಟಿಕೆಗಳಿಗೆ ಮುಂಗಾರು ಮಳೆಯು ಬಹಳ ಮಹತ್ವದ್ದು. ದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುವ ಒಟ್ಟು ಜಮೀನಿನ ಪೈಕಿ 52ರಷ್ಟು ಭಾಗವು ಮುಂಗಾರು ಮಳೆಯನ್ನೇ ನೆಚ್ಚಿಕೊಂಡಿದೆ.

ಹೀಗಾಗಿ, ಮುಂಗಾರು ಈ ಬಾರಿ ವಾಡಿಕೆಗಿಂತ ಚೆನ್ನಾಗಿ ಆಗಲಿದೆ ಎಂಬ ಅಂದಾಜು ದೇಶದ ಎಲ್ಲ ವಲಯಗಳ ಪಾಲಿಗೆ ಶುಭಸುದ್ದಿಯಂತೆ ಬಂದಿದೆ.

ಒಟ್ಟಾರೆ ಮಳೆಯ ಪ್ರಮಾಣವು ವಾಡಿಕೆಗಿಂತ ಹೆಚ್ಚು ಇರಲಿದೆ ಎಂಬ ಮಾತಿನ ಅರ್ಥ, ದೇಶದ ಎಲ್ಲ ಪ್ರದೇಶಗಳಲ್ಲಿಯೂ, ಮುಂಗಾರಿನ ಅವಧಿಯುದ್ದಕ್ಕೂ ಮಳೆ ಏಕರೂಪದಲ್ಲಿ ಇರುತ್ತದೆ ಎಂದಲ್ಲ. ಹವಾಮಾನ ಬದಲಾವಣೆಯು ಮಳೆಯ ವ್ಯತ್ಯಯವನ್ನು ಹೆಚ್ಚಿಸುವ ಕೆಲಸ ಮಾಡಲಿದೆ. ವಾಯವ್ಯ ಭಾಗದ ಕೆಲವು ಪ್ರದೇಶಗಳು, ಪೂರ್ವ ಹಾಗೂ ಈಶಾನ್ಯ ಭಾಗದ ಕೆಲವು ‍ಪ್ರದೇಶಗಳಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ, ಛತ್ತೀಸಗಢ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಹೇಗಿರಲಿದೆ ಎಂಬ ವಿಚಾರವಾಗಿ ‘ಸ್ಪಷ್ಟ ಸೂಚನೆ’ ಇಲ್ಲ.

ಸದ್ಯ ಎಲ್‌ ನಿನೊ ಪರಿಸ್ಥಿತಿ ಇದೆ. ಮುಂಗಾರು ಅವಧಿಯ ಮೊದಲಾರ್ಧದಲ್ಲಿ ಎನ್ಸೊ (ಎಲ್‌ ನಿನೊ ಹಾಗೂ ಲಾ ನಿನಾ ಎರಡೂ ಇಲ್ಲದ ತಟಸ್ಥ ಸ್ಥಿತಿ) ನಿರ್ಮಾಣ ಆಗುವ ನಿರೀಕ್ಷೆ ಇದೆ. ಅದಾದ ನಂತರದಲ್ಲಿ, ಆಗಸ್ಟ್‌–ಸೆಪ್ಟೆಂಬರ್‌ ವೇಳೆಗೆ ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಮಹಾಪಾತ್ರ ವಿವರಿಸಿದರು.

ಎಲ್‌ ನಿನೊ ಪರಿಸ್ಥಿತಿ ಸೃಷ್ಟಿಯಾದಾಗ ಮುಂಗಾರು ಮಾರುತಗಳು ದುರ್ಬಲವಾಗಿರುತ್ತವೆ. ಇದಕ್ಕೆ ವಿರುದ್ಧವಾಗಿ, ಲಾ ನಿನಾ ಪರಿಸ್ಥಿತಿಯು ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗುವ ರೀತಿಯಲ್ಲಿ ವರ್ತಿಸುತ್ತದೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ.ಎಸ್. ಪೈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.