ADVERTISEMENT

ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಭಾರತ: ಪ್ರಧಾನಿ ಮೋದಿ

ಪಿಟಿಐ
Published 10 ಮಾರ್ಚ್ 2023, 13:47 IST
Last Updated 10 ಮಾರ್ಚ್ 2023, 13:47 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಭಾರತ ಕಳೆದ ಒಂಬತ್ತು ವರ್ಷಗಳಿಂದ ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯೆಡೆಗೆ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

‘ಮಹಿಳಾ ಸಬಲೀಕರಣ’ ಕುರಿತು ಬಜೆಟ್‌ ನಂತರದ ವೆಬಿನಾರ್‌ ಉದ್ದೇಶಿಸಿ ಅವರು ಮಾತನಾಡಿದರು. ಎಂಜಿನಿಯರಿಂಗ್‌, ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ಕ್ಷೇತ್ರಗಳಲ್ಲಿ ಶೇ 43ರಷ್ಟು ಮಹಿಳೆಯರಿದ್ದಾರೆ. ಸ್ವ–ಸಹಾಯ ಗುಂಪುಗಳಲ್ಲಿಯೂ ಯೂನಿಕಾರ್ನ್‌ ಆರಂಭಿಸಬಹುದು. ಈ ವರ್ಷದ ಬಜೆಟ್‌ನಲ್ಲಿ ಈ ಉದ್ದೇಶವನ್ನು ಪ್ರಸ್ತುತಪಡಿಸಿದ್ದೇವೆ’ ಎಂದು ಹೇಳಿದರು.

ಒಂದು ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ (ಅಂದಾಜು ₹ 7,895 ಕೋಟಿ) ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ನವೋದ್ಯಮ ಕಂಪನಿಯನ್ನು ‘ಯೂನಿಕಾರ್ನ್‌’ ಎಂದು ಗುರುತಿಸಲಾಗುತ್ತದೆ.

ADVERTISEMENT

‘ಮುದ್ರಾ ಯೋಜನೆಯ ಶೇ 70ರಷ್ಟು ಫಲಾನುಭವಿಗಳು ಮಹಿಳೆಯರು. ಈ ಮಹಿಳೆಯರು ಕುಟುಂಬದ ಆದಾಯವನ್ನು ಮಾತ್ರ ಹೆಚ್ಚಿಸದೆ, ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಮಹಿಳೆಯರನ್ನು ಗೌರವಿಸುವಿಕೆ ಮತ್ತು ಸಮಾನತೆಯ ಅರಿವು ಹೆಚ್ಚಾದಾಗ ಮಾತ್ರ ಭಾರತ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. 2047ರ ವೇಳೆಗೆ ವಿಕಸಿತ ಭಾರತ ಸಾಧಿಸುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ಈ ವರ್ಷದ ಬಜೆಟ್‌ ಮಂಡಿಸಲಾಗಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ ಹೊಸ ವೇಗ ನೀಡಲಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಿಳಾ ಸಬಲೀಕರಣದ ಪ್ರಯತ್ನಗಳು ಗೋಚರಿಸುತ್ತಿವೆ. ದೇಶದ ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಕಳೆದ ಒಂಬತ್ತರಿಂದ ಹತ್ತು ವರ್ಷಗಳಲ್ಲಿ ಪ್ರೌಢಶಿಕ್ಷಣ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ’ ಎಂದು ಹೇಳಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆ, ಸ್ವನಿಧಿ ಮತ್ತಿತರ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.