ADVERTISEMENT

ಮೊದಲ ಸ್ವದೇಶಿ ಫಾಸ್ಟ್‌ ಬ್ರೀಡರ್ ರಿಯಾಕ್ಟರ್‌ 2026ರ ಸೆಪ್ಟೆಂಬರ್‌ನಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 9:49 IST
Last Updated 19 ಏಪ್ರಿಲ್ 2025, 9:49 IST
<div class="paragraphs"><p>ತಮಿಳುನಾಡಿನ ಕಲ್ಪಕಂ ಅಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ</p></div>

ತಮಿಳುನಾಡಿನ ಕಲ್ಪಕಂ ಅಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ

   

ಸಂಗ್ರಹ ಚಿತ್ರ

ನವದೆಹಲಿ: ತಮಿಳುನಾಡಿನ ಕಲ್ಪಕಂನಲ್ಲಿ ಸ್ಥಾಪಿಸಲಾಗಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ಫಾಸ್ಟ್‌ ಬ್ರೀಡರ್ ರಿಯಾಕ್ಟರ್‌ (PFBR) ಮಾದರಿಯು 2026ರ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮೂರು ಹಂತಗಳ ಪರಮಾಣು ಇಂಧನ ಕಾರ್ಯಕ್ರಮದಲ್ಲಿ ಎರಡನೇ ಹಂತ ಪೂರ್ಣಗೊಂಡಂತಾಗಲಿದೆ. ಈಗಾಗಲೇ ಬಳಕೆಯಾದ ವಿಕರಣಶೀಲ ತ್ಯಾಜ್ಯವನ್ನೇ ಮರುಬಳಕೆ ಮಾಡಿ ಇಂಧನ ಉತ್ಪಾದನೆ ಮಾಡುವುದು ಈ ಘಟಕದ ಮುಖ್ಯ ಉದ್ದೇಶವಾಗಿದೆ.

ಪ್ಲುಟೋನಿಯಂ ಆಧಾರಿತ ಮಿಶ್ರ ಆಕ್ಸೈಡ್ ಇಂಧನವಾಗಿ ಮತ್ತು ದ್ರವರೂಪದ ಸೋಡಿಯಂ ಅನ್ನು ಕೂಲೆಂಟ್‌ ಆಗಿ ಬಳಸುವ ಈ ರಿಯಾಕ್ಟರ್‌ ದೇಶದಲ್ಲಿ ಇದೇ ಮೊದಲನೆಯದಾಗಿದೆ. ಇದನ್ನು ಕಲ್ಪಕಂನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣು ವಿದ್ಯುತ್ ಸ್ಥಾವರಗಳಲ್ಲಿನ ಅತಿ ಒತ್ತಡದ ಹೆವಿ ವಾಟರ್ ರಿಯಾಕ್ಟರ್‌ಗಳಿಗೆ ಬಳಸಿದ ಇಂಧನವನ್ನೂ ಮರಳಿ ಬಳಸುವ ಸಾಮರ್ಥ್ಯ ಈ ನೂತನ ರಿಯಾಕ್ಟರ್‌ಗೆ ಇದೆ. ಹೀಗಾಗಿ ಭಾರತದಲ್ಲಿ ಇದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದಿದ್ದಾರೆ.

ಭಾರತೀಯ ಪರಮಾಣು ಇಂಧನ ನಿಗಮವು (ಎನ್‌ಪಿಸಿಐಎಲ್‌) ದೇಶದಲ್ಲಿರುವ ಅಣು ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆ ನಡೆಸುತ್ತದೆ. ಕಲ್ಪಕಂನ ಈ ಘಟಕವನ್ನು ಭಾರತೀಯ ನಾಭಿಕೀಯಾ ವಿದ್ಯುತ್ ನಿಗಮ (BHAVINI) ಅಭಿವೃದ್ಧಿಪಡಿಸಿದೆ.

ನಿಗಮವು ಅತ್ಯಾಧುನಿಕ ಘಟಕವನ್ನು 2025–26ರಲ್ಲಿ ಪರಿಚಯಿಸಲಾಗುವುದು ಎಂದು ಭಾರತೀಯ ಪರಮಾಣು ಇಂಧನ ಇಲಾಖೆಯ ಅಧಿಕಾರಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸತ್ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದರು. ಅದರಂತೆಯೇ 2026ರ ಸೆಪ್ಟೆಂಬರ್‌ಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದೆ.

2024ರ ಮಾರ್ಚ್‌ನಲ್ಲಿ ಕಲ್ಪಕಂಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಣು ಸ್ಥಾವರಕ್ಕೆ ಇಂಧನ ಭರಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಘಳಿಗೆಗೆ ಸಾಕ್ಷಿಯಾಗಿದ್ದರು. ನಂತರ ವಿವಿಧ ಹಂತಗಳ ಪರೀಕ್ಷೆಗಳೂ ನಡೆದವು. ಥೋರಿಯಂ ಆಧಾರಿತ ರಿಯಾಕ್ಟರ್‌ಗಳಿಗೆ ಈ ರಿಯಾಕ್ಟರ್‌ನ ಇಂಧನ ಬಳಸಿಕೊಳ್ಳಲಾಗುತ್ತಿದೆ.

100 ಜಿ.ವಿ. ಅಣು ವಿದ್ಯುತ್‌ ಉತ್ಪಾದನಾ ಗುರಿ

ಪರಮಾಣು ಮೂಲಕ 100 ಗಿಗಾ ವ್ಯಾಟ್‌ ವಿದ್ಯುತ್ ಉತ್ಪಾದನಾ ಗುರಿಯನ್ನು ಭಾರತ ಹೊಂದಿದೆ. ಸದ್ಯ ಭಾರತದಲ್ಲಿ 8.18 ಗಿಗಾ ವ್ಯಾಟ್ ಉತ್ಪಾದಿಸುವ ಘಟಕಗಳು ಸ್ಥಾಪನೆಯಾಗಿವೆ. ಹೆಚ್ಚುವರಿಯಾಗಿ 7.30 ಜಿವಿ ಘಟಕ ನಿರ್ಮಾಣ ಹಂತದಲ್ಲಿವೆ. 2031–32ರ ಹೊತ್ತಿಗೆ ಭಾರತದ ಪರಮಾಣು ವಿದ್ಯುತ್ ಘಟಕಗಳ ಸಾಮರ್ಥ್ಯ 22.48 ಜಿ.ವಿ. ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇವುಗಳೊಂದಿಗೆ 15.40 ಜಿವಿ ಸಾಮರ್ಥ್ಯದ ಎನ್‌ಪಿಸಿಐಎಲ್ ಸ್ವದೇಶಿ ನಿರ್ಮಿತ ಅತಿ ಒತ್ತಡದ ಹೆವಿ ವಾಟರ್ ರಿಯಾಕ್ಟರ್ ಮತ್ತು ವಿದೇಶದ ಸಹಕಾರದೊಂದಿಗೆ 17.60 ಜಿ.ವಿ. ಸಾಮರ್ಥ್ಯದ ಲಘು ಒತ್ತಡದ ಹೆವಿ ವಾಟರ್ ರಿಯಾಕ್ಟರ್‌ಗಳೊಂದಿಗೆ ಒಟ್ಟು 55 ಜಿ.ವಿ. ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಕಲ್ಪಕಂನ ಘಕಟವು 3.80 ಜಿ.ವಿ. ಕೊಡುಗೆ ನೀಡಲಿದೆ. ಹೊಸ ತಂತ್ರಜ್ಞಾನ ಸಾಧ್ಯತೆಗಳ ಕುರಿತು ಖಾಸಗಿಯವರೊಂದಿಗೂ ಒಡಂಬಡಿಕೆ ಮೂಲಕ ಹೊಸತನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.