ನವದೆಹಲಿ: ದೇಶದ ಪ್ರಾದೇಶಿಕ ಸೇನೆಯಲ್ಲಿ (ಟಿಎ) ನೋಂದಣಿ ಮಾಡಿಕೊಂಡಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ವ್ಯಕ್ತಿಯನ್ನು ಸೇನೆಯ ನೆರವಿಗೆ ಬರುವಂತೆ ಅಥವಾ ಅದಕ್ಕೆ ಪೂರಕವಾಗಿ ಸಜ್ಜಾಗೊಳಿಸುವಂತೆ ಕೇಂದ್ರ ಸರ್ಕಾರವು ಸೇನಾ ಮುಖ್ಯಸ್ಥರಿಗೆ ಸೂಚನೆ ನೀಡಿದೆ.
ಭಾರತ– ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಸೂಚಿಸಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯದ ಸೇನಾ ವ್ಯವಹಾರಗಳ ಇಲಾಖೆಯು ಮೇ 6ರಂದು ಆದೇಶ ಹೊರಡಿಸಿದೆ.
ಪ್ರಾದೇಶಿಕ ಸೇನೆಯು ಸೇನೆಯೊಂದಿಗೆ ಪೂರ್ಣವಾಗಿ ಸಂಯೋಜಿಸಲ್ಪಟ್ಟಿರುವ ಘಟಕವಾಗಿದೆ. ಯುದ್ಧ ಅಥವಾ ಸಂಘರ್ಷಗಳ ಸಂದರ್ಭದಲ್ಲಿ ಸೇವೆ ಸಲ್ಲಿಸಿ ಮಹತ್ವದ ಕೊಡುಗೆಗಳನ್ನು ನೀಡಿದ ಈ ಘಟಕದ ಹಲವು ವ್ಯಕ್ತಿಗಳು ಶೌರ್ಯ ಮತ್ತು ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಪ್ರಾದೇಶಿಕ ಸೇನೆಯು 1949ರ ಅಕ್ಟೋಬರ್ 9ರಂದು ಸ್ಥಾಪನೆಯಾಗಿದ್ದು, 75 ವರ್ಷಗಳನ್ನು ಪೂರೈಸಿದೆ. ಯುದ್ಧದ ಸಮಯದಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಹಾಗೂ ಮಾನವೀಯತೆ ಮತ್ತು ಪರಿಸರ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಮಹತ್ವದ ಉದ್ದೇಶವನ್ನು ಇದು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.