ಜೈಶಂಕರ್
ನವದೆಹಲಿ: ‘ಅಮೆರಿಕವು ಅಮೆರಿಕದಲ್ಲಿ ಇತ್ತು. ಸಂಘರ್ಷವನ್ನು ಅಂತ್ಯಗೊಳಿಸುವ ಕುರಿತು ಪಾಕಿಸ್ತಾನವು ನಮ್ಮನ್ನು ಸಂಪರ್ಕಿಸಿತು. ಭಾರತ ಮತ್ತು ಪಾಕಿಸ್ತಾನ– ಎರಡೂ ದೇಶಗಳು ನೇರವಾಗಿ ಮಾತುಕತೆ ನಡೆಸಿದ ಮೇಲೆಯೇ ಸಂಘರ್ಷ ಶಮನವಾಯಿತು’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹೇಳಿದರು.
ನೆದರ್ಲೆಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿ ದೇಶಗಳ ಪ್ರವಾಸವನ್ನು ಜೈಶಂಕರ್ ಕೈಗೊಂಡಿದ್ದು, ಸದ್ಯ ಅವರು ನೆದರ್ಲೆಂಡ್ಸ್‌ನ ದಿ ಹೇಗ್‌ನಲ್ಲಿದ್ದಾರೆ. ಈ ವೇಳೆ ಡೆನ್ಮಾರ್ಕ್‌ನ ‘ಎನ್‌ಒಎಸ್’ ಸುದ್ದಿ ವಾಹಿನಿಗೆ ಅವರು ಸಂದರ್ಶನ ನೀಡಿದರು. ಈ ವೇಳೆ ‘ತಾವು ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡುತ್ತಿದ್ದಾರೆ’ ಎನ್ನುವ ಪ್ರಶ್ನೆಗೆ ಜೈಶಂಕರ್ ಉತ್ತರಿಸಿದರು.
‘ಎರಡು ದೇಶಗಳು ಸಂಘರ್ಷದಲ್ಲಿ ತೊಡಗಿಕೊಂಡಿದ್ದರೆ, ಜಗತ್ತಿನ ಇತರೆ ಎಲ್ಲ ದೇಶಗಳು ಕರೆ ಮಾಡುತ್ತವೆ. ತಮ್ಮ ಕಳವಳ ವ್ಯಕ್ತಪಡಿಸುತ್ತವೆ. ಇದರಂತೆ, ಅಮೆರಿಕದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ನನಗೆ ಕರೆ ಮಾಡಿದ್ದರು. ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದರು’ ಎಂದರು.
‘ನಮ್ಮ ಬಳಿ ಅಮೆರಿಕ ಮಾತ್ರವಲ್ಲ ಯಾರು ಯಾರು ಮಾತನಾಡಿದ್ದಾರೊ ಅವರಿಗೆ ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದೇವೆ. ಸಂಘರ್ಷ ಅಂತ್ಯವಾಗಬೇಕು ಎಂದು ಪಾಕಿಸ್ತಾನ ಬಯಸಿದರೆ ಅವರು ನಮ್ಮೊಂದಿಗೆ ಮಾತನಾಡಬೇಕು. ಸಂಘರ್ಷ ಅಂತ್ಯಗೊಳಿಸಿ ಎಂದು ಪಾಕ್ ಹೇಳುವುದನ್ನು ನಾವೇ ಕೇಳಿಸಿಕೊಳ್ಳಬೇಕು. ಅವರ ಜನರಲ್ ನಮ್ಮ ಜನರಲ್ ಅವರೊಂದಿಗೆ ಮಾತನಾಡಬೇಕು. ಇದೇ ನಡೆದಿದ್ದು’ ಎಂದರು.
‘ಪಾಕ್ ಸಂಕಥನ ನಂಬಬಾರದು’
‘ಭಾರತದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳಲ್ಲಿ ಪಾಕಿಸ್ತಾನ ಸರ್ಕಾರದ ಸಂಸ್ಥೆಗಳು ಭಾಗಿಯಾಗಿಲ್ಲ ಎನ್ನುವ ಪಾಕಿಸ್ತಾನದ ಸಂಕಥನವನ್ನು ನಾವು ನಂಬಬಾರದು’ ಎಂದು ಜೈಶಂಕರ್ ಹೇಳಿದರು. ‘ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಭಯೋತ್ಪಾದಕರಲ್ಲಿ ಹಲವರು ಪಾಕಿಸ್ತಾನದಲ್ಲಿ ಇದ್ದಾರೆ. ಆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಕೂತು ಅವರು ಬಹಿರಂಗವಾಗಿಯೇ ಕಾರ್ಯನಿರ್ವಹಿಸುತ್ತಾರೆ. ಅವರ ವಿಳಾಸ ಎಲ್ಲರಿಗೂ ತಿಳಿದಿದೆ. ಅವರ ಕಾರ್ಯಚಟುವಟಿಕೆಗಳು ಎಲ್ಲರಿಗೂ ಗೊತ್ತಿವೆ. ಅವರ ಮತ್ತು ಸರ್ಕಾರದ ಸಂಪರ್ಕಗಳ ಬಗ್ಗೆಯೂ ಗೊತ್ತಿದೆ. ಹಾಗಾಗಿ ಪಾಕಿಸ್ತಾನ ಈ ಎಲ್ಲದರಲ್ಲಿ ಭಾಗಿಯಾಗಿಲ್ಲ ಎನ್ನುವುದನ್ನು ನಂಬುವುದು ಬೇಡ. ಪಾಕ್ ಸೇನೆ ಕೂಡ ಭಯೋತ್ಪಾದಕರೊಂದಿಗೆ ಶಾಮೀಲಾಗಿದೆ’ ಎಂದರು. ‘ಕಾಶ್ಮೀರದ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಇರುವ ಸಮಸ್ಯೆಯನ್ನು ಬಗೆಹರಿಸಲು ಟ್ರಂಪ್ ಅವರು ಸಹಕಾರ ನೀಡುವುದು ಬೇಡ. ಇದು ನಮ್ಮ ದೇಶಗಳ ದ್ವಿಪಕ್ಷೀಯ ವಿಚಾರ. ಪಾಕಿಸ್ತಾನದೊಂದಿಗೆ ನಾವು ಇದನ್ನು ಬಗೆಹರಿಸಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.