ಮಮತಾ ಬ್ಯಾನರ್ಜಿ
ಕೋಲ್ಕತ್ತ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸರ್ಕಾರಿ ನೌಕರರಿಗೆ ಮುಂದಿನ ಆದೇಶದವರೆಗೆ ರಜೆಗಳನ್ನು ರದ್ದುಪಡಿಸಿ ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಆದೇಶಿಸಿದೆ.
ರಾಜ್ಯ ಹಣಕಾಸು ಇಲಾಖೆಯು ಮೇ 7ರಂದು ಸುತ್ತೋಲೆ ಹೊರಡಿಸಿದ್ದು, ದೇಶದ ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
‘ರಾಜ್ಯ ಸರ್ಕಾರಿ ನೌಕರರಿಗೆ ಮುಂದಿನ ಆದೇಶದವರೆಗೂ ಯಾವುದೇ ರಜೆ ನೀಡಲಾಗದು. ಈಗಾಗಲೇ ರಜೆಯಲ್ಲಿರುವವರು ತಕ್ಷಣದಿಂದಲೇ ಕರ್ತವ್ಯಕ್ಕೆ ಮರಳಬೇಕು. ವೈದ್ಯಕೀಯ ಕಾರಣಗಳಿಗಾಗಿ ರಜೆ ತೆಗೆದುಕೊಂಡವರಿಗೆ ವಿನಾಯಿತಿ ನೀಡಲಾಗಿದೆ. ಯಾವುದೇ ಸಿಬ್ಬಂದಿ ತಮ್ಮ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ತಮ್ಮ ಕಾರ್ಯಕ್ಷೇತ್ರ ಬಿಟ್ಟು ಹೊರಹೋಗುವಂತಿಲ್ಲ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಧಿಕಾರಿಗಳ ಸಭೆ ನಡೆಸಿ ನೀಡಿದ ಸೂಚನೆಯ ನಂತರ ಈ ಸುತ್ತೋಲೆ ಹೊರಡಿಸಲಾಗಿದೆ. ಕೋಲ್ಕತ್ತ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ತಂಡವು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ಸಜ್ಜಾಗಿರುವಂತೆ ತಿಳಿಸಲಾಗಿದೆ.
‘ಟಾರ್ಪಲಿನ್ ಶೀಟ್‌ಗಳು, ಅಕ್ಕಿ, ಬೇಳೆಕಾಳು, ಒಣ ಆಹಾರ ಪದಾರ್ಥಗಳ ದಾಸ್ತಾನು ಮಾಡಬೇಕು. ದಿನದ ಎಲ್ಲಾ ಹೊತ್ತು ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸಬೇಕು. ಹಿರಿಯ ಅಧಿಕಾರಿಗಳು ಅಲ್ಲಿ ಇರಬೇಕಾದ್ದು ಕಡ್ಡಾಯ. ಮೊಬೈಲ್ ಫೋನ್ ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು. ನೀರಿನ ತೊಟ್ಟಿ ಮತ್ತು ಜಲಾಶಯಗಳತ್ತ ಹೆಚ್ಚಿನ ನಿಗಾ ಹೊಂದಿರಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.