ADVERTISEMENT

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 85ನೇ ಸ್ಥಾನ, ಕಳವಳ!

ಪಿಟಿಐ
Published 26 ಜನವರಿ 2022, 7:05 IST
Last Updated 26 ಜನವರಿ 2022, 7:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 'ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2021' (ಸಿಪಿಐ) ಪಟ್ಟಿಯಲ್ಲಿ 180 ದೇಶಗಳ ಪೈಕಿ ಭಾರತಕ್ಕೆ 85ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಒಂದು ಸ್ಥಾನ ಉತ್ತಮಪಡಿಸಿಕೊಂಡಿದೆ.

ಜರ್ಮನಿಯ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ (ಟಿಐ) ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸಿದ್ದು, ಭಾರತದ ಪ್ರಜಾಪ್ರಭುತ್ವದ ಸ್ಥಿತಿಗತಿಯ ಬಗ್ಗೆ ವರದಿಯು ಕಳವಳ ವ್ಯಕ್ತಪಡಿಸಿದೆ.

ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ (0ರಿಂದ 100ರವರೆಗೆ) ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ಕಡಿಮೆ ಎಂದು ಪರಿಗಣಿಸಲಾಗುತ್ತದೆ.

ADVERTISEMENT

ವಿಶ್ವದ ಬಲಿಷ್ಠ ರಾಷ್ಟ್ರವಾಗಿರುವ ಚೀನಾ ಭಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ 45 ಅಂಕಗಳೊಂದಿಗೆ ಕಳಪೆ ಸಾಧನೆ ಮಾಡಿದೆ. ಭಾರತ 40, ಇಂಡೋನೇಷ್ಯಾ 38, ನೆರೆಯ ಪಾಕಿಸ್ತಾನ 28 ಹಾಗೂ ಬಾಂಗ್ಲಾದೇಶ 26 ಅಂಕಗಳನ್ನು ಗಿಟ್ಟಿಸಿಕೊಂಡಿವೆ.

ಭೂತಾನ್ ಹೊರತುಪಡಿಸಿ ಇತರೆ ಎಲ್ಲ ನೆರೆಯ ರಾಷ್ಟ್ರಗಳು ಭಾರತಕ್ಕಿಂತಲೂ ಕಳಪೆ ಸಾಧನೆಗೈದಿವೆ. 16 ಸ್ಥಾನಗಳ ಕುಸಿತ ಕಂಡಿರುವ ಪಾಕಿಸ್ತಾನ 140ಕ್ಕೆ ತಲುಪಿದೆ.

ಭಾರತದಲ್ಲಿ ಭ್ರಷ್ಟಾಚಾರದ ಕುರಿತು ವಿಶೇಷವಾಗಿ ಕಳವಳ ವ್ಯಕ್ತಪಡಿಸಿರುವ ವರದಿಯು, ಕಳೆದೊಂದು ದಶಕದಲ್ಲಿ ರ‍್ಯಾಂಕಿಂಗ್ ಸ್ಥಿರವಾಗಿದ್ದರೂ, ಭ್ರಷ್ಟಾಚಾರದಲ್ಲಿ ಆಳ್ವಿಕೆ ನಡೆಸಲು ಸಹಾಯ ಮಾಡುವ ಕೆಲವು ಕಾರ್ಯವಿಧಾನಗಳು ದುರ್ಬಲಪಡಿಸುತ್ತಿವೆ ಎಂದು ಹೇಳಿದೆ.

ಭಾರತದ ಭ್ರಷ್ಟಾಚಾರದ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ದೇಶದಲ್ಲಿ ಪ್ರಮುಖವಾಗಿಯೂ ಪ್ರತಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಪಾಯದಲ್ಲಿದ್ದು, ರಾಜಕೀಯ ಉಗ್ರರು, ಕ್ರಿಮಿನಲ್ ಗ್ಯಾಂಗ್ ಮತ್ತು ಭ್ರಷ್ಟ ಅಧಿಕಾರಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ ಎಂದು ಸೂಚ್ಯಂಕ ಆಧಾರದಲ್ಲಿ ವರದಿಯು ಹೇಳಿದೆ.

ಸರ್ಕಾರದ ವಿರುದ್ಧ ಮಾತನಾಡುವ ನಾಗರಿಕ ಸಂಘಟನೆಗಳನ್ನು ಭದ್ರತೆ, ಮಾನನಷ್ಟ, ದೇಶದ್ರೋಹ, ದ್ವೇಷದ ಭಾಷಣ, ನ್ಯಾಯಾಲಯದ ನಿಂದನೆ ಆರೋಪ ಮತ್ತು ವಿದೇಶಿ ನಿಧಿಯ ಮೇಲಿನ ನಿಯಮಗಳೊಂದಿಗೆ ಗುರಿಪಡಿಸಲಾಗುತ್ತಿದೆ ಎಂದು ವರದಿಯು ಆರೋಪಿಸಿದೆ.

ಡೆನ್ಮಾರ್ಕ್, ಫಿನ್ಲೆಡ್, ನ್ಯೂಜಿಲೆಂಡ್ ಮತ್ತು ನಾರ್ವೆ ರಾಷ್ಟ್ರಗಳು ಅತ್ಯಧಿಕ ಅಂಕಗಳೊಂದಿಗೆ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.