ADVERTISEMENT

ಅರುಣಾಚಲ ಪ್ರದೇಶದ 11 ಹಳ್ಳಿಗಳ ಹೆಸರು ಬದಲಾವಣೆ: ತಳ್ಳಿ ಹಾಕಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2023, 12:50 IST
Last Updated 4 ಏಪ್ರಿಲ್ 2023, 12:50 IST
   

ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಹೆಸರುಗಳನ್ನು ಚೀನಾ ಬದಲಾಯಿಸಿರುವುದನ್ನು ಭಾರತ ಮಂಗಳವಾರ ಸಾರಾಸಗಟಾಗಿ ತಿರಸ್ಕರಿಸಿದೆ.

ಅಲ್ಲದೇ, ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ. ರಾಜ್ಯದ ಕೆಲವು ಸ್ಥಳಗಳಿಗೆ ‘ಕಲ್ಪಿತ’ ಹೆಸರುಗಳನ್ನು ಇಡುವುದರಿಂದ ವಾಸ್ತವ ಬದಲಾಗುವುದಿಲ್ಲ’ ಎಂದೂ ತಿರುಗೇಟು ನೀಡಿದೆ.

ಅರುಣಾಚಲ ಪ್ರದೇಶದ ಮತ್ತೆ 11 ಸ್ಥಳಗಳಿಗೆ ಚೀನಿ ಹೆಸರುಗಳನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಭಾರತವು ಈ ಪ್ರತಿಕ್ರಿಯೆ ನೀಡಿದೆ. ಅರುಣಾಚಲ ಪ್ರದೇಶವನ್ನು ತನ್ನ ವಶದಲ್ಲಿರುವ ಟಿಬೆಟ್‌ನ ದಕ್ಷಿಣ ಭಾಗ ಎಂದು ಚೀನಾ ಹೇಳಿಕೊಳ್ಳುತ್ತಿದೆ.

ADVERTISEMENT

‘ಸ್ಥಳಗಳ ಹೆಸರುಗಳನ್ನು ಬದಲಾವಣೆ ಮಾಡಿರುವ ಕುರಿತ ವರದಿಗಳನ್ನು ಗಮನಿಸಿದ್ದೇವೆ. ಚೀನಾ ಇಂಥ ದುಸ್ಸಾಹಸ ಮಾಡುತ್ತಿರುವುದು ಇದೇ ಮೊದಲ ಸಲವೇನಲ್ಲ. ಭಾರತವು ಇಂಥ ನಡೆಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದರು.

ಅರುಣಾಚಲ ಪ್ರದೇಶದ ಭೌಗೋಳಿಕ ಪ್ರದೇಶಗಳ ಹೆಸರುಗಳ ಬದಲಾವಣೆಗೆ ಸಂಬಂಧಿಸಿ ಚೀನಾ ಈಗ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದಂತಾಗಿದೆ. ಮೊದಲ ಪಟ್ಟಿಯನ್ನು 2017ರಲ್ಲಿ ಬಿಡುಗಡೆ ಮಾಡಿತ್ತು.

2021ರಲ್ಲಿ ಬಿಡುಗಡೆ ಮಾಡಲಾಗಿದ್ದ ಎರಡನೇ ಪಟ್ಟಿಯಲ್ಲಿ 15 ಸ್ಥಳಗಳ ಹೆಸರುಗಳನ್ನು ಬದಲಾವಣೆ ಮಾಡಿತ್ತು. ಭಾನುವಾರ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯ ಪ್ರಕಾರ, 11 ಸ್ಥಳಗಳ ಹೆಸರುಗಳನ್ನು ಚೀನಾ ಬದಲಾಯಿಸಿದೆ.

ಮೂರನೇ ಪಟ್ಟಿಯಲ್ಲಿರುವ ಸ್ಥಳಗಳನ್ನು ಸೂಚಿಸುವ ನಿರ್ದೇಶಾಂಕಗಳನ್ನು ಕೂಡ ಚೀನಾ ಬಿಡುಗಡೆ ಮಾಡಿದೆ. ಈ ನಿರ್ದೇಶಾಂಕಗಳು ಎರಡು ಭೂಪ್ರದೇಶಗಳು, ಎರಡು ಜನವಸತಿ ಪ್ರದೇಶಗಳು, ಐದು ಪರ್ವತ ಪ್ರದೇಶಗಳು ಹಾಗೂ ಎರಡು ನದಿಗಳನ್ನು ಸೂಚಿಸುತ್ತವೆ.

ಅಲ್ಲದೇ, ಈ 11 ಸ್ಥಳಗಳ ವರ್ಗೀಕರಣ, ಅವುಗಳು ಆಡಳಿತಾತ್ಮಕವಾಗಿ ಯಾವ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುತ್ತವೆ ಎಂಬುದನ್ನು ಸಹ ವಿವರಿಸಲಾಗಿದೆ ಎಂದು ಸರ್ಕಾರ ಒಡೆತನದ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

ಕಾಂಗ್ರೆಸ್ ಆಕ್ಷೇಪ–ಟೀಕೆ: ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರುಗಳನ್ನು ಬದಲಾವಣೆ ಮಾಡಿರುವ ಚೀನಾದ ನಡೆಗೆ ಕಾಂಗ್ರೆಸ್‌ ಪಕ್ಷವು ಮಂಗಳವಾರ ಭಾರಿ ಆಕ್ಷೇಪ ವ್ಯಕ್ತಪಡಿಸಿದೆ.

‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಹಾಗೆಯೇ ಮುಂದುವರಿಯುವುದು. ಗಾಲ್ವಾನ್ ವಿದ್ಯಮಾನಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ‘ಕ್ಲೀನ್‌ ಚಿಟ್‌’ ನೀಡಿದ್ದರ ಪರಿಣಾಮವನ್ನು ದೇಶ ಈಗ ಎದುರಿಸುವಂತಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರೂ ಈ ಕುರಿತು ಟ್ವೀಟ್‌ ಮಾಡಿದ್ದು, ‘ಚೀನಾ ಈಗಾಗಲೇ ಭಾರತದ 2,000 ಚದರ ಕಿ.ಮೀ.ನಷ್ಟು ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಸ್ಥಳಗಳ ಹೆಸರುಗಳನ್ನೂ ಬದಲಾಯಿಸುತ್ತಿದೆ. ಆದರೆ, ಪ್ರಧಾನಿ ಮೌನವಾಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲ! ಪ್ರಧಾನಿಗಳೇ ಯಾಕಿಷ್ಟು ಹೆದರಿಕೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.