
ನವದೆಹಲಿ: ಭಾರತ–ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಡಿ.4, 5ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾದ ರಕ್ಷಣಾ ಸಚಿವ ಆಂಡ್ರೆ ಬೆಲೊಸೊವ್ ಅವರು ಗುರುವಾರ ಮಾತುಕತೆ ನಡೆಸಲಿದ್ದಾರೆ.
ಪುಟಿನ್ ಅವರ ನಿಯೋಗದಲ್ಲಿ ಆಂಡ್ರೆ ಬೆಲೊಸೊವ್ ಕೂಡ ಇದ್ದಾರೆ.
ಎಸ್– 400 ಕ್ಷಿಪಣಿ ವ್ಯವಸ್ಥೆಗಳ ಖರೀದಿ, ಸುಖೋಯ್–30 ಎಂಕೆಐ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ರಷ್ಯಾದಿಂದ ಇತರ ಮಿಲಿಟರಿ ಸಾಧನಗಳನ್ನು ಖರೀದಿಸುವುದರಲ್ಲಿ ಭಾರತದ ಆಸಕ್ತಿ ಕುರಿತು ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.
ರಷ್ಯಾದಿಂದ ಭಾರತಕ್ಕೆ, ಯುದ್ಧೋಪಕರಣಗಳ ತ್ವರಿತ ಪೂರೈಕೆ ಹಾಗೂ ಎರಡೂ ದೇಶಗಳ ನಡುವಿನ ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಗುರಿ ಇದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದರು.
ನಾಗರಿಕ ಅಣುಶಕ್ತಿ ಕ್ಷೇತ್ರದಲ್ಲಿ ಭಾರತದ ಜೊತೆ ಸಹಕಾರವನ್ನು ಮತ್ತಷ್ಟು ವೃದ್ಧಿಸುವುದಕ್ಕೆ ಸಂಬಂಧಿಸಿದ ಒಡಂಬಡಿಕೆಗೆ (ಎಂಒಯು) ರಷ್ಯಾ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಡಿಸೆಂಬರ್ 4 ಮತ್ತು 5ರಂದು ಕೈಗೊಂಡಿರುವ ಭಾರತ ಪ್ರವಾಸ ವೇಳೆ ಈ ಕುರಿತ ಒಪ್ಪಂದಕ್ಕೆ ಉಭಯ ದೇಶಗಳು ಅಂಕಿತ ಹಾಕಲಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದ ಅಣು ನಿಗಮ ರೊಸಾಟಮ್, ತಮಿಳುನಾಡಿನ ಕೂಡಂಕುಳಂನಲ್ಲಿರುವ ಅಣುಶಕ್ತಿ ಸ್ಥಾವರದಲ್ಲಿ ಹಲವು ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದೆ. ಈಗ, ಭಾರತದೊಂದಿಗಿನ ಅಣುಶಕ್ತಿ ಒಪ್ಪಂದಕ್ಕೆ ರಷ್ಯಾ ಸರ್ಕಾರದ ಪರವಾಗಿ ಸಹಿ ಹಾಕುವುದಕ್ಕೆ ಈ ನಿಗಮಕ್ಕೆ ಅಧಿಕಾರ ನೀಡಲಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.
‘ನವದೆಹಲಿಯಲ್ಲಿ ನಡೆಯುವ ಉಭಯ ದೇಶಗಳ ನಾಯಕರ ಸಭೆಯಲ್ಲಿ ಈ ಕುರಿತ ಪ್ರಸ್ತಾವನೆಗಳನ್ನು ರೊಸಾಟಮ್ ಸಿಇಒ ಅಲೆಕ್ಸಿ ಲಿಗಾಚೆವ್ ಮಂಡಿಸುವರು’ ಎಂದು ಕ್ರೆಮ್ಲಿನ್ ವಕ್ತಾರ ದಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.