ADVERTISEMENT

ಹಳೆಯದನ್ನೆಲ್ಲಾ ಕೆದಕಿ ಸಾಮರಸ್ಯ ಹಾಳುಗೆಡವದಿರಿ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 5:26 IST
Last Updated 28 ಫೆಬ್ರುವರಿ 2023, 5:26 IST
   

ನವದೆಹಲಿ: ‘ಹಳೆಯದನ್ನೆಲ್ಲಾ ಕೆದಕಬೇಡಿ. ಅದರಿಂದ ಸಾಮರಸ್ಯ ಹಾಳಾಗುತ್ತದೆಯೇ ಹೊರತು ಇನ್ಯಾವ ಪ್ರಯೋಜನವೂ ಇಲ್ಲ. ಈ ದೇಶವು ದ್ವೇಷದ ಜ್ವಾಲೆಯಲ್ಲಿ ಕುದಿಯುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

‘ದೇಶದಲ್ಲಿ ಆಳ್ವಿಕೆ ನಡೆಸಿದ್ದ ಆಕ್ರಮಣಕಾರರು ಹೆಸರು ಬದಲಿಸಿರುವ ಪುರಾತನ, ಸಾಂಸ್ಕೃತಿಕ, ಧಾರ್ಮಿಕ ಸ್ಥಳಗಳಿಗೆ ಹಳೆಯ ಹೆಸರುಗಳನ್ನೇ ಇಡಲು ‘ಮರುನಾಮಕರಣ ಆಯೋಗ’ ರಚಿಸಬೇಕು’ ಎಂದು ಕೋರಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇದನ್ನು ವಜಾಗೊಳಿಸಿತು.

‘ಭಾರತವು ಜಾತ್ಯತೀತ ರಾಷ್ಟ್ರ. ನಾವು ಈ ದೇಶದ ಸಂವಿಧಾನ ಹಾಗೂ ಎಲ್ಲಾ ವರ್ಗಗಳನ್ನೂ ರಕ್ಷಿಸಬೇಕು. ಹಿಂದುತ್ವವು ಕೇವಲ ಧರ್ಮವಲ್ಲ. ಅದೊಂದು ಜೀವನ ಕ್ರಮ. ಈ ವಿಚಾರದಲ್ಲಿ ಯಾವುದೇ ಧರ್ಮಾಂಧತೆ ಬೇಡ. ನಾವು ಎಲ್ಲಾ ಬಗೆಯ ಸಂಸ್ಕೃತಿಯನ್ನೂ ಮೈಗೂಡಿಸಿಕೊಂಡಿದ್ದೇವೆ. ಇಂತಹ ಅರ್ಜಿಗಳ ಮೂಲಕ ಸಹಬಾಳ್ವೆಯನ್ನು ನಾಶಪಡಿಸಬೇಡಿ. ಧರ್ಮವನ್ನಷ್ಟೇ ಅಲ್ಲ. ಈ ದೇಶವನ್ನೂ ಗಮನದಲ್ಲಿಟ್ಟುಕೊಳ್ಳಿ’ ಎಂದು ಕಿಡಿಕಾರಿತು.

ADVERTISEMENT

‘ನೀವು ಅಥವಾ ಈ ನ್ಯಾಯಾಲಯವು ವಿನಾಶ ಸೃಷ್ಟಿಸುವ ಸಾಧನವಾಗಬಾರದು. ಈ ದೇಶದಲ್ಲಿ ಸಮಾಜದ ಎಲ್ಲಾ ಸ್ತರದ ಜನರೂ ಒಗ್ಗೂಡಿ ಬಾಳಬೇಕು’ ಎಂದು ನ್ಯಾಯಪೀಠವು ಅರ್ಜಿದಾರರಿಗೆ ಹೇಳಿತು.

‘ಇಂತಹ ಅರ್ಜಿಗಳ ಮೂಲಕ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ. ದೇಶವು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಮೆಟ್ಟಿನಿಲ್ಲುವ ಹಾದಿಯಲ್ಲಿ ಸಾಗುತ್ತಿದೆ. ಹೀಗಿರುವಾಗ ನೀವು ‘ಮರುನಾಮಕರಣ ಆಯೋಗ’ ರಚಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರುತ್ತಿದ್ದೀರಿ. ವಿದೇಶಿಯರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದರು ಮತ್ತು ಆಳ್ವಿಕೆ ನಡೆಸಿದ್ದರು ಎಂಬುದು ವಾಸ್ತವಾಂಶ’ ಎಂದೂ ನ್ಯಾಯಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.