ADVERTISEMENT

ಸಿಪಿಇಸಿ ಸೇರಲು ಇತರ ದೇಶಗಳಿಗೆ ಚೀನಾ, ಪಾಕ್‌ ಆಹ್ವಾನ: ಭಾರತ ಆಕ್ಷೇಪ

ಪಿಟಿಐ
Published 26 ಜುಲೈ 2022, 12:11 IST
Last Updated 26 ಜುಲೈ 2022, 12:11 IST
ಅರಿಂದಮ್ ಬಾಗ್ಚಿ
ಅರಿಂದಮ್ ಬಾಗ್ಚಿ   

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹಾಯ್ದು ಹೋಗುವ, ಶತಕೋಟಿ ಡಾಲರ್‌ ವೆಚ್ಚದ ಕಾರಿಡಾರ್‌ ನಿರ್ಮಾಣ ಯೋಜನೆಯಲ್ಲಿ ಭಾಗಿಯಾಗುವಂತೆ ಇತರ ದೇಶಗಳನ್ನು ಉತ್ತೇಜಿಸುತ್ತಿರುವ ಚೀನಾ ಹಾಗೂ ಪಾಕಿಸ್ತಾನದ ಯತ್ನಗಳನ್ನು ಭಾರತ ಮಂಗಳವಾರ ಖಂಡಿಸಿದೆ.

ಉಭಯ ದೇಶಗಳ ಈ ನಡೆ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌’ (ಸಿಪಿಇಸಿ) ಅಡಿ ಕೈಗೊಳ್ಳುವ ಇಂಥ ಚಟುವಟಿಕೆಗಳು ಕಾನೂನುಬಾಹಿರ. ಇವುಗಳನ್ನು ಒಪ್ಪಲು ಸಾಧ್ಯವಿಲ್ಲ. ಇಂಥ ಕ್ರಮಗಳಿಗೆ ತಕ್ಕ ಉತ್ತರ ನೀಡಲಾಗುವುದು‘ ಎಂದಿದ್ದಾರೆ.

‘ಇತರ ದೇಶಗಳು ಸಿಪಿಇಸಿ ಯೋಜನೆಯಲ್ಲಿ ಪಾಲ್ಗೊಳ್ಳುವುದನ್ನು ಚೀನಾ ಹಾಗೂ ಪಾಕಿಸ್ತಾನ ಪ್ರೋತ್ಸಾಹಿಸುವುದಕ್ಕೆ ಸಂಬಂಧಿಸಿದ ವರದಿಗಳನ್ನು ಭಾರತ ಗಮನಿಸಿದೆ. ಯಾವುದೇ ದೇಶ ಈ ಯೋಜನೆಗಳಲ್ಲಿ ಭಾಗಿಯಾಗಲು ಮುಂದಾಗುವುದು ಕಂಡುಬಂದಲ್ಲಿ, ಅದು ಭಾರತದ ಸಾರ್ವಭೌಮತೆ ಹಾಗೂ ಭೌಗೋಳಿಕ ಸಮಗ್ರತೆಗೆ ಧಕ್ಕೆ ತಂದಂತಾಗಲಿದೆ’ ಎಂದು ಅವರು ಎಚ್ಚರಿಸಿದರು.

ಇತ್ತೀಚೆಗೆ ನಡೆದ ಸಿಪಿಇಸಿಯ ಜಂಟಿ ಕಾರ್ಯಕಾರಿ ಗ್ರೂಪ್‌ನ (ಜೆಡಬ್ಲ್ಯುಜಿ) ಸಭೆಯಲ್ಲಿ, ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಇತರ ದೇಶಗಳು ಪಾಲ್ಗೊಳ್ಳುವುದನ್ನು ಸ್ವಾಗತಿಸಲು ಪಾಕಿಸ್ತಾನ ಹಾಗೂ ಚೀನಾ ನಿರ್ಧರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.