ADVERTISEMENT

ಐಎನ್‌ಎಸ್‌ ಅರಿಹಂತ್‌ ನಿಯೋಜನೆ: ಪಾಕ್ ಟೀಕೆಗೆ ಭಾರತ ತಿರುಗೇಟು

ಶಾಂತಿ ಮತ್ತು ಸ್ಥಿರತೆಗಾಗಿ ಜಲಾಂತರ್ಗಾಮಿ ನೌಕೆ

ಪಿಟಿಐ
Published 9 ನವೆಂಬರ್ 2018, 19:46 IST
Last Updated 9 ನವೆಂಬರ್ 2018, 19:46 IST
ಐಎನ್ಎಸ್‌ ಅರಿಹಂತ್
ಐಎನ್ಎಸ್‌ ಅರಿಹಂತ್   

ನವದೆಹಲಿ: ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ನೌಕೆ ಐಎನ್‌ಎಸ್‌ ಅರಿಹಂತ್‌ ನಿಯೋಜನೆಗೆ ಆತಂಕ ವ್ಯಕ್ತಪಡಿಸಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ‘ಜವಾಬ್ದಾರಿಯೇ ಇಲ್ಲದ’ ದೇಶವೊಂದು ನಮ್ಮ ಜಲಾಂತರ್ಗಾಮಿ ನೌಕೆ ನಿಯೋಜನೆ ಬಗ್ಗೆ ಟೀಕೆ ಮಾಡಿದೆ ಎಂದು ಹೇಳಿದೆ.

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್‌ ಫೈಸಲ್‌, ‘ಅಣ್ವಸ್ತ್ರ ಸಿಡಿತಲೆಗಳನ್ನು ಹಾರಿಸಲು ಸಿದ್ಧವಾಗಿರುವಂತಹ ಜಲಾಂತರ್ಗಾಮಿಯನ್ನು ದಕ್ಷಿಣ ಏಷ್ಯಾದಲ್ಲಿ ಮೊದಲ ಬಾರಿಗೆ ನಿಯೋಜಿಸಲಾಗಿದೆ. ಇದು ಬಂಗಾಳಕೊಲ್ಲಿ ಕಡಲತೀರದ ದೇಶಗಳಿಗೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಸಮುದಾಯಕ್ಕೂ ದೊಡ್ಡ ಮಟ್ಟದಲ್ಲಿ ಆತಂಕ ತರುವ ವಿಷಯ’ ಎಂದು ಹೇಳಿದ್ದರು.

‘ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಆಕ್ರಮಣಕಾರಿ ನೀತಿಯ ಭಾಗವಾಗಿ ಅಲ್ಲ; ಬದಲಿಗೆ ಶಾಂತಿ ಮತ್ತು ಸ್ಥಿರತೆಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ’ ಎಂದು, ಫೈಸಲ್‌ ಟೀಕೆಗಳಿಗೆ ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರ ರವೀಶ್‌ ಕುಮಾರ್ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ADVERTISEMENT

‘ನಮ್ಮದು ಜವಾಬ್ದಾರಿಯುತ ದೇಶ. ಬೇಜವಾಬ್ದಾರಿಯಿಂದ ಕೂಡಿದ ದೇಶವೊಂದು ಐಎನ್‌ಎಸ್‌ ಅರಿಹಂತ್ ನಿಯೋಜನೆಯ ಬಗ್ಗೆ ಮಾತನಾಡುತ್ತಿದೆ’ ಎಂದು ರವೀಶ್‌ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.