
ನವದೆಹಲಿ: ರಷ್ಯಾದ ಬೃಹತ್ ತೈಲ ಕಂಪನಿಗಳಾದ ‘ರೋಸ್ನೆಫ್ಟ್’ ಮತ್ತು ‘ಲುಕೋಯಿಲ್’ ಮೇಲೆ ಇತ್ತೀಚೆಗೆ ಅಮೆರಿಕ ವಿಧಿಸಿರುವ ನಿರ್ಬಂಧದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ತಿಳಿಸಿದರು.
‘ಭಾರತವು ಜಾಗತಿಕ ಮಾರುಕಟ್ಟೆಯ ಚಲನಶೀಲತೆಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ 140 ಕೋಟಿ ಜನರ ಇಂಧನದ ಅಗತ್ಯಗಳನ್ನು ಪೂರೈಸಲು ವೈವಿಧ್ಯಮಯ ಮೂಲಗಳಿಂದ ಕೈಗೆಟುಕುವ ದರದಲ್ಲಿ ಇಂಧನ ಖರೀದಿಸಲು ಒತ್ತು ನೀಡುತ್ತದೆ’ ಎಂದೂ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತದ ತೈಲ ಖರೀದಿದಾರರು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಧಾನವಾಗಿ ಕಡಿಮೆ ಮಾಡುತ್ತಿದ್ದಾರೆ ಮತ್ತು ಅಮೆರಿಕದಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಎದುರು ನೋಡುತ್ತಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಜೈಸ್ವಾಲ್ ಅವರಿಂದ ಪ್ರತಿಕ್ರಿಯೆ ಬಂದಿದೆ.
ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಭಾರತ ಮತ್ತು ಅಮೆರಿಕ ನಿರತವಾಗಿವೆ ಎಂದು ಅವರು ಇದೇ ವೇಳೆ ಪ್ರತಿಕ್ರಿಯಿಸಿದರು.
ಛಾಬಹಾರ್ ಬಂದರು: ಆರು ತಿಂಗಳು ವಿನಾಯಿತಿ
ಭಾರತ ನಿರ್ವಹಿಸುತ್ತಿರುವ ಇರಾನ್‌ನ ಛಾಬಹಾರ್ ಬಂದರು ಯೋಜನೆ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಆರು ತಿಂಗಳು ವಿನಾಯಿತಿ ದೊರೆತಿದೆ ಎಂದು ಜೈಸ್ವಾಲ್ ಮಾಹಿತಿ ನೀಡಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಕ್ಟೋಬರ್ 29ರಿಂದ ಜಾರಿಗೆ ಬರುವಂತೆ ಆರು ತಿಂಗಳವರೆಗೆ ವಿನಾಯಿತಿ ನೀಡಿ ಆದೇಶಿಸಿದ್ದಾರೆ ಎಂದು ಅವರು ಹೇಳಿದರು. ಛಾಬಹಾರ್ ಬಂದರಿನ ಕಾರ್ಯನಿರ್ವಹಣೆ ಕುರಿತು ಇರಾನ್ ಮತ್ತು ಭಾರತ ಸರ್ಕಾರ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿವೆ. ಈ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ಸರ್ಕಾರಗಳು 2003 2015 ಮತ್ತು 2017ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. 2018ರಿಂದ ಈ ಬಂದರನ್ನು ಭಾರತವೇ ನಿರ್ವಹಿಸುತ್ತಿದೆ. ಅದನ್ನು 10 ವರ್ಷಗಳಿಗೆ ವಿಸ್ತರಿಸಿ ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಗಿದೆ.
ಅಫ್ಗಾನಿಸ್ತಾನದ ಸಾರ್ವಭೌಮತ್ವಕ್ಕೆ ಭಾರತ ಬದ್ಧ
ಪಾಕಿಸ್ತಾನ– ಅಫ್ಗಾನಿಸ್ತಾನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಫ್ಗಾನಿಸ್ತಾನವನ್ನು ಬೆಂಬಲಿಸಿರುವ ಭಾರತವು ಅಫ್ಗಾನಿಸ್ಥಾನದ ಸಾರ್ವಭೌಮತ್ವ ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಪೂರ್ಣವಾಗಿ ಗೌರವಿಸುತ್ತದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ‘ಶಿಕ್ಷಿಸುವ’ ಕುರಿತು ಮಾಡುತ್ತಿರುವ ‘ಅಭ್ಯಾಸ’ವು ಅದರ ಪಕ್ಕದ ದೇಶವಾದ ಅಫ್ಗಾನಿಸ್ತಾನಕ್ಕೆ ಸ್ವೀಕಾರಾರ್ಹವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು. ಅಫ್ಗಾನಿಸ್ತಾನವು ತನ್ನದೇ ಆದ ಪ್ರದೇಶಗಳ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಿರುವುದರಿಂದ ಪಾಕಿಸ್ತಾನ ಕುಪಿತಗೊಂಡಿದೆ ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.