ಅಂಚೆ ಇಲಾಖೆ
ನವದೆಹಲಿ: ಅಂಚೆ ಇಲಾಖೆಯು ಅಮೆರಿಕಕ್ಕೆ ಕೆಲವು ವಸ್ತುಗಳ ರವಾನೆ ಸೇವೆಯನ್ನು ಅಮಾನತಿನಲ್ಲಿ ಇರಿಸಿದೆ.
ಅಮೆರಿಕದ ಸೀಮಾಸುಂಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಅಮೆರಿಕಕ್ಕೆ ತೆರಳುವ ವಿಮಾನಗಳು ವಸ್ತುಗಳನ್ನು ಒಯ್ಯಲು ಒಪ್ಪುತ್ತಿಲ್ಲ. ಹೀಗಾಗಿ ಅಂಚೆ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎಂದು ಸಂವಹನ ಸಚಿವಾಲಯವು ಶನಿವಾರ ಹೇಳಿದೆ.
ಆದರೆ ಪತ್ರಗಳು, ಕಡತಗಳು ಹಾಗೂ 100 ಡಾಲರ್‌ಗಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ಅಮೆರಿಕಕ್ಕೆ ಕಳುಹಿಸಿಕೊಡುವ ಸೇವೆಗಳು ಮುಂದುವರಿಯುತ್ತವೆ ಎಂದು ಅದು ಸ್ಪಷ್ಟಪಡಿಸಿದೆ.
ಅಮೆರಿಕದ ಆಡಳಿತವು 2025ರ ಜುಲೈ 30ರಂದು ಹೊರಡಿಸಿರುವ ಕಾರ್ಯಕಾರಿ ಆದೇಶದ ಪ್ರಕಾರ 100 ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಸರಕುಗಳಿಗೆ ಅಮೆರಿಕದಲ್ಲಿ ಆಗಸ್ಟ್ 29ರಿಂದ ಸುಂಕ ವಿಧಿಸಲಾಗುತ್ತದೆ. ಈ ಕಾರ್ಯಕಾರಿ ಆದೇಶದಲ್ಲಿ ಹೇಳಿರುವಂತೆ, ಅಂತರರಾಷ್ಟ್ರೀಯ ಅಂಚೆ ಜಾಲ ಅಥವಾ ‘ಅಮೆರಿಕದ ಸೀಮಾಸುಂಕ ಮತ್ತು ಗಡಿ ರಕ್ಷಣಾ ವಿಭಾಗ’ದ ಒಪ್ಪಿಗೆ ಪಡೆದಿರುವ ಇತರ ಅರ್ಹ ಸಂಸ್ಥೆಗಳ ಮೂಲಕ ಸರಕು ಸಾಗಣೆ ಮಾಡಿಕೊಡುವ ಸಂಸ್ಥೆಗಳು ಸುಂಕದ ಮೊತ್ತ ಸಂಗ್ರಹಿಸಬೇಕು, ಆ ಮೊತ್ತವನ್ನು ಜಮಾ ಮಾಡಬೇಕು.
‘ಸುಂಕವನ್ನು ಸಂಗ್ರಹಿಸುವುದು ಹಾಗೂ ಅದನ್ನು ಜಮಾ ಮಾಡುವುದಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ಹೀಗಾಗಿ, ಅಮೆರಿಕಕ್ಕೆ ವಿಮಾನ ಸೇವೆ ಒದಗಿಸುವ ಕಂಪನಿಗಳು ಆಗಸ್ಟ್ 25ರ ನಂತರ ಅಂಚೆ ಸರಕುಗಳನ್ನು ಸ್ವೀಕರಿಸಲು ಆಗದು ಎಂದು ಹೇಳಿವೆ’ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬೆಳವಣಿಗೆಯ ನಂತರದಲ್ಲಿ ಪತ್ರಗಳು, ಕಡತಗಳು ಮತ್ತು 100 ಡಾಲರ್ ಒಳಗಿನ ಉಡುಗೊರೆಗಳನ್ನು ಹೊರತುಪಡಿಸಿ ಇತರ ಯಾವುದೇ ವಸ್ತುಗಳನ್ನು ಆಗಸ್ಟ್ 25ರ ನಂತರ ಅಮೆರಿಕಕ್ಕೆ ಸಾಗಿಸುವ ಬುಕಿಂಗ್‌ಗಳನ್ನು ಸ್ವೀಕರಿಸದೆ ಇರಲು ಅಂಚೆ ಇಲಾಖೆಯು ತೀರ್ಮಾನಿಸಿದೆ ಎಂದು ಸಚಿವಾಲಯ ಹೇಳಿದೆ.
ಯಾರ ಸರಕುಗಳನ್ನು ಸಾಗಿಸಲು ಸಾಧ್ಯವಿಲ್ಲವೋ ಅವರಿಗೆ ಶುಲ್ಕವನ್ನು ಅಂಚೆ ಇಲಾಖೆಯು ಮರಳಿಸುತ್ತಿದೆ. ‘ಸರಕುಗಳನ್ನು ಅಮೆರಿಕಕ್ಕೆ ರವಾನಿಸಲು ಈಗಾಗಲೇ ಬುಕ್ ಮಾಡಿದ್ದರೆ, ಅವುಗಳನ್ನು ಅಲ್ಲಿಗೆ ಕಳುಹಿಸಲು ಈ ಕಾರಣಗಳಿಂದಾಗಿ ಸಾಧ್ಯವಾಗದೆ ಇದ್ದರೆ ಶುಲ್ಕವನ್ನು ಮರಳಿಸುವಂತೆ ಗ್ರಾಹಕರು ಕೋರಬಹುದು’ ಎಂದು ಇಲಾಖೆ ಹೇಳಿದೆ. ಅಮೆರಿಕಕ್ಕೆ ಸೇವೆಗಳನ್ನು ಆದಷ್ಟುಬೇಗ ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.