
ನವದೆಹಲಿ: ‘ಜಗತ್ತಿನಲ್ಲಿ ಕ್ಯಾನ್ಸರ್ ಹರಡುವಿಕೆಯಲ್ಲಿ ಚೀನಾ, ಅಮೆರಿಕದ ನಂತರ ಭಾರತ ಮೂರನೇ ಸ್ಥಾನದಲ್ಲಿದೆ. 2040ರ ವೇಳೆಗೆ ದೇಶದಲ್ಲಿ ಸುಮಾರು 20 ಲಕ್ಷ ಪ್ರಕರಣಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದರು.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರಜನಿ ಅಶೋಕರಾವ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ವಿಶ್ವದಾದ್ಯಂತ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಪ್ರತಿ ವರ್ಷ 2 ಕೋಟಿ ಮಂದಿ ಕ್ಯಾನ್ಸರ್ ಬಾಧಿತರಾಗುತ್ತಿದ್ದಾರೆ. ಭಾರತದಲ್ಲಿ ಸುಮಾರು 15 ಲಕ್ಷ ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗಾಗಿ ಮೊದಲ ಬಾರಿಗೆ ಎಚ್‌ಪಿವಿ ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿದೆ. ಇದು ಹೆಚ್ಚಿನ ಜನರಿಗೆ ಕೈಗೆಟುಕುವ ದರದಲ್ಲಿ ಅಥವಾ ಉಚಿತವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.