ಮ್ಯಾನ್ಮಾರ್‌ಗೆ ಎನ್‌ಡಿಆರ್‌ಎಫ್ ತಂಡ
ಪಿಟಿಐ
ನವದೆಹಲಿ: ಮ್ಯಾನ್ಮಾರ್‌ನಲ್ಲಿ ನೆರವು ಕಾರ್ಯಾಚರಣೆಗೆ ಕೈಜೋಡಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್) 80 ಮಂದಿಯ ತುಕಡಿಯನ್ನು ಭಾರತವು ಕಳುಹಿಸಲಿದೆ. ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಈ ತುಕಡಿಯನ್ನು ರವಾನಿಸಲಾಗುತ್ತಿದೆ.
2015ರಲ್ಲಿ ನೇಪಾಳದಲ್ಲಿ ಭೂಕಂಪನ ಉಂಟಾದಾಗ ಹಾಗೂ 2023ರಲ್ಲಿ ಟರ್ಕಿಯಲ್ಲಿ ಭೂಕಂಪನ ಸಂಭವಿಸಿದಾಗ ಭಾರತವು ಎನ್‌ಡಿಆರ್‌ಎಫ್ ತಂಡವನ್ನು ಅಲ್ಲಿಗೆ ಕಳುಹಿಸಿತ್ತು. ನೆರೆಯ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ದೇಶಗಳು ಭೂಕಂಪನದಿಂದ ನಲುಗಿದ ನಂತರ ‘ಆಪರೇಷನ್ ಬ್ರಹ್ಮ’ ಹೆಸರಿನಲ್ಲಿ ನೆರವಿನ ಹಸ್ತ ಚಾಚಿರುವ ಭಾರತವು ಮ್ಯಾನ್ಮಾರ್‌ಗೆ 15 ಟನ್‌ಗಳಷ್ಟು ಪರಿಹಾರ ಸಾಮಗ್ರಿ ರವಾನಿಸಿದೆ.
ಡೇರೆಗಳು ಹೊದಿಕೆ ಸೇವಿಸಲು ಸಿದ್ಧವಾಗಿರುವ ಊಟ ನೀರು ಶುದ್ಧೀಕರಣ ಯಂತ್ರ ಸೌರದೀಪಗಳು ವಿದ್ಯುತ್ ಜನರೇಟರ್‌ಗಳು ಅಗತ್ಯ ಔಷಧಗಳನ್ನು ಹೊತ್ತ ವಾಯುಪಡೆಯ ವಿಮಾನವು ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ತೆರಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಎರಡು ವಿಮಾನಗಳಲ್ಲಿ ಅಗತ್ಯ ವಸ್ತುಗಳನ್ನು ಭಾರತದಿಂದ ಕಳುಹಿಸಲಾಗುತ್ತದೆ. ಜೊತೆಗೆ ನೌಕಾಪಡೆಯ ಎರಡು ಹಡಗುಗಳು ಕೂಡ ನೆರವಿಗೆ ಮ್ಯಾನ್ಮಾರ್‌ನತ್ತ ಧಾವಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.