ADVERTISEMENT

ಬ್ರಿಟನ್–ಭಾರತ ರಕ್ಷಣಾಸಚಿವರ ಭೇಟಿ:ಸಹಕಾರ ವೃದ್ಧಿಪಡಿಸುವ ಮಾರ್ಗಗಳ ಕುರಿತು ಚಿಂತನೆ

ಪಿಟಿಐ
Published 10 ಅಕ್ಟೋಬರ್ 2025, 15:44 IST
Last Updated 10 ಅಕ್ಟೋಬರ್ 2025, 15:44 IST
<div class="paragraphs"><p>ಮುಂಬೈನಲ್ಲಿ ಶುಕ್ರವಾರ ನಡೆದ ಬ್ರಿಟನ್‌–ಭಾರತ ರಕ್ಷಣಾ ಸಹಕಾರ ಕುರಿತ ಸಭೆಯಲ್ಲಿ ಕೇಂದ್ರ ರಕ್ಷಣಾ ರಾಜ್ಯ ಸಚಿವ ಸಂಜಯ್‌ ಸೇಥ್‌ ಅವರು ಬ್ರಿಟನ್‌ನ ರಕ್ಷಣಾ ಖಾತೆ ರಾಜ್ಯ ಸಚಿವ ವೆರ್ನ್‌ ಕೊಕರ್‌ ಅವರಿಗೆ ಉಡುಗೊರೆ ನೀಡಿದರು– </p></div>

ಮುಂಬೈನಲ್ಲಿ ಶುಕ್ರವಾರ ನಡೆದ ಬ್ರಿಟನ್‌–ಭಾರತ ರಕ್ಷಣಾ ಸಹಕಾರ ಕುರಿತ ಸಭೆಯಲ್ಲಿ ಕೇಂದ್ರ ರಕ್ಷಣಾ ರಾಜ್ಯ ಸಚಿವ ಸಂಜಯ್‌ ಸೇಥ್‌ ಅವರು ಬ್ರಿಟನ್‌ನ ರಕ್ಷಣಾ ಖಾತೆ ರಾಜ್ಯ ಸಚಿವ ವೆರ್ನ್‌ ಕೊಕರ್‌ ಅವರಿಗೆ ಉಡುಗೊರೆ ನೀಡಿದರು–

   

‘ಎಕ್ಸ್’ ಚಿತ್ರ

ಮುಂಬೈ: ಭಾರತ ಹಾಗೂ ಬ್ರಿಟನ್‌ ನಡುವೆ ರಕ್ಷಣಾ ವ್ಯವಹಾರಗಳ ಸಹಕಾರ ವೃದ್ಧಿಪಡಿಸುವ ಮಾರ್ಗಗಳ ಕುರಿತು ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್‌ ಸೇಥ್‌ ಹಾಗೂ ಬ್ರಿಟನ್‌ನ ರಕ್ಷಣಾ ಖಾತೆ ರಾಜ್ಯ ಸಚಿವ ವೆರ್ನ್‌ ಕೊಕರ್‌ ಶುಕ್ರವಾರ ವಿಸ್ತೃತ ಚರ್ಚೆ ನಡೆಸಿದರು. 

ADVERTISEMENT

ಬ್ರಿಟನ್‌ನ ಕ್ಯಾರಿಯರ್‌ ಸ್ಟ್ರೈಕ್‌ ಗ್ರೂಪ್ (ಸಿಎಸ್‌ಜಿ) ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಇಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರು ಹಲವು ವಿಚಾರಗಳ ಕುರಿತು ಚರ್ಚಿಸಿದರು.

‘ಬ್ರಿಟನ್ ಹಾಗೂ ಭಾರತ ನಡುವಿನ ರಕ್ಷಣಾ ವ್ಯವಹಾರದಲ್ಲಿನ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು’ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಮುಂಬೈನಲ್ಲಿ ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ವಿಸ್ತೃತ ಚರ್ಚೆ ನಡೆಸಿದ ಮರುದಿನವೇ ಈ ಸಭೆಯೂ ನಡೆದಿದೆ. 

‘ಬ್ರಿಟನ್‌ನ ರಾಜ ವೇಲ್ಸ್‌ ನೇತೃತ್ವದ ಸಿಎಸ್‌ಜಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಜೊತೆಗೆ ದ್ವಿಪಕ್ಷೀಯ ಕಡಲಾಭ್ಯಾಸ ಕೊಂಕಣ್‌–25 ಯಶಸ್ವಿಯಾಗಿ ಪೂರ್ಣಗೊಳಿಸಿದೆ’ ಎಂದು ಸಂಜಯ್‌ ಸೇಥ್‌ ತಿಳಿಸಿದರು.

‘ಸದ್ಯ ಈ ಪಡೆಯು ಮುಂಬೈ ಹಾಗೂ ಗೋವಾದಲ್ಲಿ ಸಮುದ್ರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಇಂತಹ ಕಾರ್ಯಾಚರಣಾ ಸಂವಹನಗಳು ಪರಸ್ಪರ ತಿಳಿವಳಿಕೆ ಹೆಚ್ಚಿಸಿ, ಎರಡು ನೌಕಾಪಡೆಗಳ ಕಾರ್ಯಸಾಧ್ಯತೆಗೆ ಗಮನಾರ್ಹ ಕೊಡುಗೆ ನೀಡುತ್ತವೆ’ ಎಂದು ತಿಳಿಸಿದರು.

ಆತ್ಮನಿರ್ಭರತೆಯ ಪರಿಕಲ್ಪನೆಯ ಅಡಿಯಲ್ಲಿ ರಕ್ಷಣಾ ಸಲಕರಣೆಗಳ ತಯಾರಿಕೆಯಲ್ಲಿ ಭಾರತವು ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದ್ದು, ದೇಶೀಯ ವ್ಯವಸ್ಥೆಗಳನ್ನು ಬಲಪಡಿಸಿಕೊಂಡಿದೆ. ಈ ದಿಸೆಯಲ್ಲಿ ಉಭಯ ರಾಷ್ಟ್ರಗಳು ರಕ್ಷಣಾ ಸಹಕಾರದ ವಿವಿಧ ಆಯಾಮಗಳ ಕುರಿತು ಸಭೆಯಲ್ಲಿ ಅಭಿಪ‍್ರಾಯಗಳು ವ್ಯಕ್ತವಾಯಿತು. 

‘ಜಾಗತಿಕ ರಕ್ಷಣಾ ಪೂರೈಕೆ ಸರಪಳಿಯಲ್ಲಿ ಲಭ್ಯವಾಗುವ ಅವಕಾಶ ಹಾಗೂ ಸಹಯೋಗದ ಕುರಿತು ಎರಡು ರಾಷ್ಟ್ರಗಳು ಬದ್ಧತೆ ವ್ಯಕ್ತಪಡಿಸಿದವು. ಇಂಡೋ– ಫೆಸಿಫಿಕ್‌ ಹಾಗೂ ಹಿಂದೂ ಮಹಾಸಾಗರದಲ್ಲಿ ಸಹಕಾರ ವೃದ್ಧಿ‍ಪ‍ಡಿಸಲು ಒಪ್ಪಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಸಭೆಯ ಬಳಿಕ ಮಾತನಾಡಿದ ವೆರ್ನ್‌ ಕೊಕರ್‌, ‘ಹಿಂದೂ ಮಹಾಸಾಗರದಲ್ಲಿ ಭದ್ರತೆಯನ್ನು ಕಾಪಾಡಿ, ಸಿಎಸ್‌ಜಿಗೆ ಭಾರತದ ಬಂದರುಗಳಲ್ಲಿ ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಭಾರತಕ್ಕೆ ಧನ್ಯವಾದಗಳು. ಈ ಪ್ರದೇಶದ ಭದ್ರತೆ ಹಾಗೂ ಸ್ಥಿರತೆ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಜೊತೆಗೂಡಿ ಕೆಲಸ ಮಾಡಲಿವೆ. ಈ ವಿಚಾರದಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸಲಿದ್ದು, ಮಿತ್ರ ರಾಷ್ಟ್ರದೊಂದಿಗಿನ ಜೊತೆಗೂಡಿ ಕೆಲಸ ಮಾಡುವ ಬದ್ಧತೆಯೂ ಮುಂದುವರಿಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.