ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರಕ್ಕೆ ಎರಡು ದಿನಗಳ ಭೇಟಿ ಕೈಗೊಳ್ಳಲಿದ್ದಾರೆ. ಅಕ್ಟೋಬರ್ 8 ಹಾಗೂ 9ರಂದು ಪ್ರಧಾನಿ ಮೋದಿ ಅವರ ಮಹಾರಾಷ್ಟ್ರ ಪ್ರವಾಸ ನಿಗದಿಯಾಗಿದೆ.
ಈ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿರುವ ಬಳಿಕ ಸ್ಟಾರ್ಮರ್ ಅವರ ಮೊದಲ ಭಾರತ ಭೇಟಿ ಇದಾಗಿದೆ.
ಮುಕ್ತ ವ್ಯಾಪಾರ, ವಿಷನ್ 2035, ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆಯೂ ಮೋದಿ ಹಾಗೂ ಸ್ಟಾರ್ಮರ್ ಮಾತುಕತೆ ನಡೆಸಲಿದ್ದಾರೆ.
ಉಭಯ ದೇಶಗಳ ನಾಯಕರು ಜಿಯೊ ವರ್ಲ್ಡ್ ಸೆಂಟರ್‌ನಲ್ಲಿ ಸಿಇಒ ಫಾರಂನಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ 'ಗ್ಲೋಬಲ್ ಫಿನ್‌ಟೆಕ್ ಫೆಸ್ಟ್'ನಲ್ಲೂ ಪಾಲ್ಗೊಳ್ಳಲಿದ್ದಾರೆ.
ಇದು ವಿಶ್ವದ ಅತಿ ದೊಡ್ಡ ಫಿನ್‌ಟೆಕ್ ಕೂಟಗಳಲ್ಲಿ ಒಂದಾಗಿದ್ದು, ಈ ವರ್ಷ 75ಕ್ಕೂ ಹೆಚ್ಚು ದೇಶಗಳ ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಅವರು ನವಿ ಮುಂಬೈಯಲ್ಲಿ ಹೊಸದಾಗಿ ನಿರ್ಮಿಸಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ₹19,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಮುಂಬೈ ಮೆಟ್ರೊ ಮಾರ್ಗ 3ರ ಅಂತಿಮ ಹಂತವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದನ್ನು ₹37,270 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ 11 ಸಾರ್ವಜನಿಕ ಸಾರಿಗೆ ನಿರ್ವಾಹಕರನ್ನು ಒಳಗೊಂಡಿರುವ 'ಮುಂಬೈ ಒನ್' ಎಂಬ ಆ್ಯಪ್ ಅನ್ನು ಉದ್ಘಾಟಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.