ADVERTISEMENT

ಭಾರತ– ಅಮೆರಿಕ ಒಪ್ಪಂದ ತಡೆಹಿಡಿಯಿರಿ: ಕಾಂಗ್ರೆಸ್‌

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಪುನಃ ಮಾತುಕತೆ ನಡೆಸಲು ಆಗ್ರಹ

ಪಿಟಿಐ
Published 21 ಫೆಬ್ರುವರಿ 2026, 19:31 IST
Last Updated 21 ಫೆಬ್ರುವರಿ 2026, 19:31 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ : ‘ವಿವಿಧ ದೇಶಗಳ ಆಮದುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿದ್ದ ಸುಂಕಗಳನ್ನು ಅಲ್ಲಿನ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ– ಅಮೆರಿಕ ನಡುವಿನ ವ್ಯಾಪಾರ ಕುರಿತ ಮಧ್ಯಂತರ ಒಪ್ಪಂದವನ್ನು ತಡೆಹಿಡಿಯಬೇಕು ಮತ್ತು ಪುನಃ ಮಾತುಕತೆ ನಡೆಸಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಭಾರತೀಯ ರೈತರ ಹಿತಕ್ಕೆ ಧಕ್ಕೆ ಆಗುವುದಿಲ್ಲ ಎಂಬುದರ ಕುರಿತು ಅಮೆರಿಕದಿಂದ ಸ್ಪಷ್ಟತೆ ದೊರೆಯುವವರೆಗೆ ಒಪ್ಪಂದದ ಅಡಿ ಆಮದು ಇರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಶನಿವಾರ ಒತ್ತಾಯ ಮಾಡಿದರು.  

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಅಮೆರಿಕದ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಕಾರಣ, ಉಭಯ ದೇಶಗಳ ನಡುವಿನ ಒಪ್ಪಂದ ಮತ್ತು ಅದರಲ್ಲಿನ ನಿಯಮಗಳ ಕುರಿತು ಹೊಸದಾಗಿ ಮಾತುಕತೆ ನಡೆಯಬೇಕು’ ಎಂದು ಆಗ್ರಹಿಸಿದರು. 

ADVERTISEMENT

‘ತೀರ್ಪಿನ ನಂತರವೂ ಭಾರತದ ಜತೆಗಿನ ವ್ಯಾಪಾರ ಒಪ್ಪಂದದಲ್ಲಿ ಏನೂ ಬದಲಾವಣೆ ಇರುವುದಿಲ್ಲ ಎಂಬುದಾಗಿ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ. ಅದನ್ನು ಪ್ರಧಾನಿ ಮೋದಿ ಒಪ್ಪುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಕೇಳಿದರು. 

ಮಧ್ಯಂತರ ಒಪ್ಪಂದದ ಕುರಿತು ಫೆಬ್ರುವರಿ 2ರಂದು ಟ್ರಂಪ್‌ ಘೋಷಿಸಿದ್ದರು. ಆದರೆ, ಈ ಒಪ್ಪಂದಕ್ಕೆ ಪ್ರಧಾನಿ ಮೋದಿ ಅವರು ಅಷ್ಟೋಂದು ಆತುರ ತೋರಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.