ADVERTISEMENT

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ | ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 10:42 IST
Last Updated 14 ಫೆಬ್ರುವರಿ 2026, 10:42 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಣ ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.

ಹತ್ತಿ ಬೆಳೆಯುವ ರೈತರಿಗೆ ಹಾಗೂ ಜವಳಿ ರಫ್ತುದಾರರ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಭಾರತದ ಜವಳಿ ರಫ್ತಿಗೆ ಅಮೆರಿಕ ಶೇ 18 ತೆರಿಗೆ ವಿಧಿಸುತ್ತಿದೆ, ಆದರೆ ಬಾಂಗ್ಲಾದೇಶದ ಜವಳಿ ರಫ್ತಿಗೆ ಶೂನ್ಯ ಸುಂಕ ವಿಧಿಸುತ್ತಿದೆ. ಅದೂ ಕೂಡ ಅಮೆರಿಕದಿಂದ ಹತ್ತಿ ಆಮದು ಮಾಡಿಕೊಳ್ಳಬೇಕು ಎನ್ನುವ ಷರತ್ತಿನೊಂದಿಗೆ’ ಎಂದು ಅವರು ಹೇಳಿದ್ದಾರೆ.

ಅಮೆರಿಕದಿಂದ ಹತ್ತಿ ಆಮದು ಮಾಡಿಕೊಳ್ಳುವುದು ದೇಶೀಯ ಹತ್ತಿ ಬೆಳೆಗಾರರಿಗೆ ಹಾನಿಯುಂಟು ಮಾಡುತ್ತದೆ. ಒಂದು ವೇಳೆ ಆಮದು ಮಾಡಿಕೊಳ್ಳದಿದ್ದರೆ ಜವಳಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಬಾಂಗ್ಲಾದೇಶವು ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು ಅಥವಾ ನಿಲ್ಲಿಸಬಹುದು, ಇದು ಹತ್ತಿ ಬೆಳೆಗಾರರಿಗೆ ಇನ್ನಷ್ಟು ನಷ್ಟ ಉಂಟು ಮಾಡುತ್ತದೆ ಎಂದಿದ್ದಾರೆ.

‘ಶೇ 18 ಸುಂಕ vs ಶೇ 0– ಸುಳ್ಳು ಹೇಳುವುದರಿಲ್ಲಿ ಪರಿಣತ ಪ್ರಧಾನಿ ಹಾಗೂ ಅವರ ಸಚಿವ ಸಂಪುಟ ಈ ಬಗ್ಗೆ ಹೇಗೆ ಗೊಂದಲ ಸೃಷ್ಟಿಸುತ್ತದೆ, ಭಾರತ–ಅಮೆರಿಕ ಒಪ್ಪಂದ ಮೂಲಕ ಹತ್ತಿ ಬೆಳೆಗಾರಿಗೆ ಹಾಗೂ ಜವಳಿ ರಫ್ತುದಾರರಿಗೆ ಹೇಗೆ ಮೋಸ ಮಾಡುತ್ತಿದ್ದಾರೆ ಎಂದು ಎಂದು ನಾನು ನಿಮಗೆ ವಿವರಿಸುತ್ತೇನೆ’ ಎಂದು ವಿಡಿಯೊ ಪೋಸ್ಟ್‌ನ ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶದ ಜವಳಿಗೆ ಅಮೆರಿಕ ಶೂನ್ಯ ತೆರಿಗೆ ವಿಧಿಸುತ್ತಿದ್ದು, ಅಮೆರಿಕದ ಹತ್ತಿಯನ್ನು ಕೊಂಡುಕೊಳ್ಳಬೇಕೆಂದು ಬಾಂಗ್ಲಾಗೆ ಷರತ್ತು ವಿಧಿಸಲಾಗಿದೆ. ಭಾರತದ ಜವಳಿ ರಫ್ತಿಗೆ ಶೇ 18 ತೆರಿಗೆ ವಿಧಿಸಿ, ಬಾಂಗ್ಲಾದೇಶಕ್ಕೆ ರಿಯಾಯತಿ ನೀಡಿದ್ದನ್ನು ಪ್ರಶ್ನಿಸಿದರೆ, ಮೋದಿ ಸರ್ಕಾರ ಸಚಿವರ ಉತ್ತರ ಹೀಗಿತ್ತು– ‘ನಮಗೂ ಅದೇ ರೀತಿಯ ರಿಯಾಯಿತಿ ಬೇಕಿದ್ದರೆ, ಅಮೆರಿಕದಿಂದ ನಾವೂ ಹತ್ತಿಯನ್ನು ಕೊಂಡುಕೊಳ್ಳಬೇಕು’. ಯಾಕೆ ಈ ಸತ್ಯವನ್ನು ಇದುವರೆಗೂ ದೇಶದ ಜನರಿಂದ ಮುಚ್ಚಿಡಲಾಗಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ವ್ಯಾಪಾರ ಒಪ್ಪಂದವು, ಲಕ್ಷಾಂತರ ಭಾರತೀಯರನ್ನು ನಿರುದ್ಯೋಗಕ್ಕೆ ತಳ್ಳಲಿದೆ, ಆರ್ಥಿಕ ಸಂಕಷ್ಟ ಉಂಟಾಗಲಿದೆ ಎಂದಿದ್ದಾರೆ.

ಇದು ಯಾವ ತರಹದ ನೀತಿ? ಇದು ನಿಜವಾಗಿಯೂ ಒಂದು ಆಯ್ಕೆಯೇ? ಅಥವಾ ನಮ್ಮನ್ನು ‘ಮುಂದೆ ಬಾವಿ, ಹಿಂದೆ ಹಳ್ಳ’ ಎಂಬ ಸಂದಿಗ್ಧ ಪರಿಸ್ಥಿತಿಗೆ ತಳ್ಳಲು ರೂಪಿಸಿದ ಸಂಚೇ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.