ADVERTISEMENT

ಪ್ರತಿಸುಂಕ ರದ್ದು | ದ್ರೋಹ ಬಯಲಾಗಿದೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಏಜೆನ್ಸೀಸ್
Published 21 ಫೆಬ್ರುವರಿ 2026, 7:10 IST
Last Updated 21 ಫೆಬ್ರುವರಿ 2026, 7:10 IST
   

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ಶುಕ್ರವಾರ ರದ್ದುಗೊಳಿಸಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ಪ್ರಧಾನಿ ಮೋದಿ, ಟ್ರಂಪ್‌ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರ ದ್ರೋಹ ಈಗ ಬಹಿರಂಗವಾಗಿದೆ. ಈ ಬಗ್ಗೆ ಅವರು ಮತ್ತೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಅವರು ಮತ್ತೆ ಶರಣಾಗುತ್ತಾರೆ' ಎಂದು ರಾಹುಲ್ ಕುಟುಕಿದ್ದಾರೆ.

5 ತಿಂಗಳವರೆಗೆ ಶೇ 10ರಷ್ಟು ಸುಂಕ

ಸುಪ್ರೀಂ ಕೋರ್ಟ್‌ನ ತೀರ್ಪನ್ನು 'ಭಯಾನಕ ನಿರ್ಧಾರ' ಎಂದು ಬಣ್ಣಿಸಿದ ಟ್ರಂಪ್, ಅಮೆರಿಕಕ್ಕೆ ಆಮದಾಗುವ ಎಲ್ಲ ವಸ್ತುಗಳ ಮೇಲೆ ಮುಂದಿನ ಐದು ತಿಂಗಳವರೆಗೆ ಜಾಗತಿಕವಾಗಿ ಶೇ 10ರಷ್ಟು ಸುಂಕ ವಿಧಿಸಲಾಗುವುದು ಎಂದು ಶುಕ್ರವಾರ ಘೋಷಿಸಿದ್ದಾರೆ. ‘1974ರ ವ್ಯಾಪಾರ ಕಾಯ್ದೆಯ ಸೆಕ್ಷನ್‌ 122ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗುವುದು’ ಎಂದು ಟ್ರಂಪ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಎಲ್ಲ ದೇಶಗಳ ಮೇಲೆ 150 ದಿನಗಳವರೆಗೆ ಶೇ 15ರವರೆಗೆ ಸುಂಕ ವಿಧಿಸಲು ಈ ಕಾಯ್ದೆಯು ಅಧ್ಯಕ್ಷರಿಗೆ ಅವಕಾಶ ನೀಡುತ್ತದೆ. ನಮ್ಮ ಬಳಿ ಅತ್ಯುತ್ತಮ ಪರ್ಯಾಯ ಮಾರ್ಗಗಳಿವೆ. ಇವು ಹೆಚ್ಚಿನ ಹಣವನ್ನು ತರಬಹುದು. ಇದರಿಂದ ನಾವು ಇನ್ನಷ್ಟು ಬಲಿಷ್ಠರಾಗುತ್ತೇವೆ’ ಎಂದು ತಿಳಿಸಿದ್ದಾರೆ.

ಟ್ರಂಪ್‌ ಸುಂಕಕ್ಕೆ ‘ಸುಪ್ರೀಂ’ ಗುದ್ದು

ಟ್ರಂಪ್‌ ಅವರು ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 6:3 ಬಹುಮತದ ತೀರ್ಪು ನೀಡಿತು. ‘ಸುಂಕಗಳನ್ನು ಒಳಗೊಂಡಂತೆ ಎಲ್ಲ ರೀತಿಯ ತೆರಿಗೆಗಳನ್ನು ವಿಧಿಸುವ ಅಧಿಕಾರವು ಕಾಂಗ್ರೆಸ್‌ಗೆ (ಸಂಸತ್ತು) ಮಾತ್ರ ಇದೆ ಎಂಬುದನ್ನು ಸಂವಿಧಾನದಲ್ಲಿ ‘ಬಹಳ ಸ್ಪಷ್ಟವಾಗಿ’ ಹೇಳಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಸುವ 1977ರ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ ಮೂಲಕ ಟ್ರಂಪ್‌ ಅವರು ಅಧ್ಯಕ್ಷರ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ ಎಂಬ ಫೆಡರಲ್‌ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಬಹುಮತದಿಂದ ಎತ್ತಿಹಿಡಿದರು.

‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ ಅಡಿ (ಐಇಇಪಿಎ) ಸುಂಕ ವಿಧಿಸುವ ಅಧಿಕಾರವು ಅಧ್ಯಕ್ಷರಿಗೆ ಇದೆ ಎಂಬ ಟ್ರಂಪ್‌ ಆಡಳಿತದ ವ್ಯಾಖ್ಯಾನವು ಕಾಂಗ್ರೆಸ್‌ನ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸಿದಂತೆ’ ಎಂದು ಹೇಳಿತು. ‘ಆದರೆ ಇತರ ಕಾನೂನುಗಳಡಿ ತೆರಿಗೆ ವಿಧಿಸುವ ಅಧ್ಯಕ್ಷರ ಅಧಿಕಾರಕ್ಕೆ ಯಾವುದೇ ತಡೆ ವಿಧಿಸುವುದಿಲ್ಲ’ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.