ನವದೆಹಲಿ: ಅಮೆರಿಕ ಮತ್ತು ಭಾರತ ನಡುವಿನ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದವು ನಿಗದಿತ ಗಡುವು ಜುಲೈ 8ರ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.
ಏಪ್ರಿಲ್ 2ರಂದು ಅಮೆರಿಕವು ಪ್ರತಿ ಸುಂಕ ಹೇರಿತ್ತು. ಇದಕ್ಕೆ 90 ದಿನಗಳ ‘ವಿರಾಮ’ ಘೋಷಿಸಿತ್ತು. ‘ವಿರಾಮ’ವು ಜುಲೈ 9ರ ವರೆಗೆ ಜಾರಿಯಲ್ಲಿ ಇರಲಿದೆ. ಹೀಗಾಗಿ, ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಕುರಿತಂತೆ ಅನಿಶ್ಚಿತ ಸ್ಥಿತಿ ಮನೆ ಮಾಡಿದ್ದು, ಇದು ರಫ್ತುದಾರರ ಆತಂಕ ಹೆಚ್ಚಿಸಿದೆ.
ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರಗಳ ಹಿತಾಸಕ್ತಿ ಕಾಪಾಡುವುದಕ್ಕೆ ಭಾರತ ಒತ್ತು ನೀಡಿದೆ. ಈ ವಿಚಾರವು ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ವಿಳಂಬವಾಗಲು ಕಾರಣ ಎಂದೂ ಮೂಲಗಳು ಹೇಳಿವೆ.
ಸೇಬು ಹಣ್ಣುಗಳು, ಕುಲಾಂತರಿ ಆಹಾರಗಳು ಸೇರಿ ಕೃಷಿ ಉತ್ಪನ್ನಗಳು, ಹೈನು ಉತ್ಪನ್ನಗಳಿಗೆ ರಿಯಾಯಿತಿ ತೆರಿಗೆ ಪಡೆಯುವ ಮೂಲಕ ತನ್ನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತವಾಗಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಇವೇ ಮೂಲಗಳು ತಿಳಿಸಿವೆ.
ಆದರೆ, ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜಿಯಾಗಲು ಭಾರತ ಒಪ್ಪಿಲ್ಲ. ಅದರಲ್ಲೂ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ರಿಯಾಯಿತಿಯು ಭಾರತ ಈವರೆಗೆ ಸಹಿ ಮಾಡಿದ ಯಾವುದೇ ವ್ಯಾಪಾರ ಒಪ್ಪಂದಗಳ ಭಾಗವೂ ಆಗಿಲ್ಲ. ಇದೇ ವೇಳೆ, ‘ಭಾರತದ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯತೆ’ ಎಂದು ಕೇಂದ್ರ ಸರ್ಕಾರದ ಮೂಲವೊಂದು ಹೇಳಿದೆ.
ಕೃಷಿ ಕ್ಷೇತ್ರವು ರಾಜಕೀಯವಾಗಿ ಮತ್ತು ಆರ್ಥಿಕವಾಗಿಯೂ ಭಾರತದಲ್ಲಿ ಬಹಳ ಸೂಕ್ಷ್ಮ ವಿಚಾರವಾಗಿದೆ. ಗ್ರಾಮೀಣ ಆರ್ಥಿಕತೆಯ ಮುಖ್ಯ ಭಾಗವೂ ಆಗಿರುವ ಕೃಷಿ ಕ್ಷೇತ್ರದ ವಿಚಾರವಾಗಿ ರಾಜಿ ಮಾಡಿಕೊಂಡಲ್ಲಿ, ಅದು ಗ್ರಾಮೀಣ ಭಾಗದ ಶೇ 70ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವ ಸಾಧ್ಯತೆಗಳು ಕಡಿಮೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇನ್ನೊಂದೆಡೆ, ‘ಭಾರತ ಮತ್ತು ಅಮೆರಿಕ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮಧ್ಯೆ, ವಾಣಿಜ್ಯ ಇಲಾಖೆ ವಿಶೇಷ ಕಾರ್ಯದರ್ಶಿ ಹಾಗೂ ಮುಖ್ಯ ಸಂಧಾನಕಾರರಾದ ರಾಜೇಶ್ ಅಗರವಾಲ್ ನೇತೃತ್ವದ ನಿಯೋಗವು ಅಮೆರಿಕದಲ್ಲಿದ್ದು, ವ್ಯಾಪಾರ ಒಪ್ಪಂದ ಕುರಿತಂತೆ ಮಾತುಕತೆ ನಡೆಸುತ್ತಿರುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.