ADVERTISEMENT

ಆರ್ಥಿಕ ಪ್ರಗತಿ| ಇನ್ನಷ್ಟು ಸಾಂಸ್ಥಿಕ ಸುಧಾರಣೆಗಳ ಭರವಸೆ, ಪ್ರಧಾನಿ ಮೋದಿ ವಿಶ್ವಾಸ

ಪಿಟಿಐ
Published 2 ಜೂನ್ 2020, 20:00 IST
Last Updated 2 ಜೂನ್ 2020, 20:00 IST
ಸಿಐಐ ವಾರ್ಷಿಕ ಅಧಿವೇಶನದಲ್ಲಿ ನರೇಂದ್ರ ಮೋದಿ
ಸಿಐಐ ವಾರ್ಷಿಕ ಅಧಿವೇಶನದಲ್ಲಿ ನರೇಂದ್ರ ಮೋದಿ   

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯು ಬೆಳವಣಿಗೆಯ ಹಾದಿಗೆ ಖಂಡಿತವಾಗಿಯೂ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮೂಡೀಸ್‌, ದೇಶದ ಕ್ರೆಡಿಟ್‌ ರೇಟಿಂಗ್‌ ತಗ್ಗಿಸಿದ ಮರು ದಿನವೇ, ಆರ್ಥಿಕತೆಯು ಪುಟಿದೇಳುವ ಬಗ್ಗೆ ಅವರು ಭರವಸೆ ನೀಡಿದ್ದಾರೆ. ಮಂಗಳವಾರ ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ಅಧಿವೇಶನದಲ್ಲಿ ಅವರು ವಿಡಿಯೊ ಕಾನ್‌ಫೆರನ್ಸ್‌ ಮೂಲಕ ಮಾತನಾಡುತ್ತಿದ್ದರು.

‘ನಾವು ಖಂಡಿತವಾಗಿಯೂ ನಮ್ಮ ಆರ್ಥಿಕತೆಯ ಪ್ರಗತಿಯನ್ನು ಮರಳಿ ಪಡೆಯಲಿದ್ದೇವೆ. ದೇಶಬಾಂಧವರು, ರೈತರು, ಉದ್ದಿಮೆದಾರರು ಮತ್ತು ಎಂಎಸ್‌ಎಂಇ ವಲಯದಲ್ಲಿ ಈ ಗುರಿ ಸಾಧಿಸುವ ಸಾಮರ್ಥ್ಯ ಇದೆ. ಭಾರತೀಯರ ಸಾಮರ್ಥ್ಯ, ಪ್ರತಿಭೆ, ಬುದ್ಧಿವಂತಿಕೆ ಮತ್ತು ಹೊಸ ಚಿಂತನೆಗಳ ಬಗ್ಗೆ ನನ್ನಲ್ಲಿ ದೃಢ ವಿಶ್ವಾಸ ಇದೆ. ಖಾಸಗಿ ವಲಯವು ದೇಶದ ಆರ್ಥಿಕ ಪ್ರಗತಿಯಲ್ಲಿ ಭಾಗಿಯಾಗಿದೆ. ಪ್ರಗತಿಯ ಹಾದಿಗೆ ಮರಳುವುದಕ್ಕೆ ನಾನು ದೇಶಿ ಉದ್ದಿಮೆಗಳ ಬೆನ್ನಿಗೆ ನಿಂತಿರುವೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜಾರಿಗೆ ತಂದಿರುವ ಸುಧಾರಣಾ ಕ್ರಮಗಳು ದೀರ್ಘಾವಧಿಯಲ್ಲಿ ಆರ್ಥಿಕತೆಗೆ ನೆರವಾಗಲಿವೆ.

ADVERTISEMENT

ಮುಂಬರುವ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನೂ ಪ್ರಧಾನಿ ನೀಡಿದ್ದಾರೆ. ‘ಆರ್ಥಿಕತೆಯ ಚೌಕಟ್ಟು ಬದಲಿಸುವ ಸಾಂಸ್ಥಿಕ ಮತ್ತು ನಿಯಂತ್ರಣ ಕ್ರಮಗಳಲ್ಲಿ ಸುಧಾರಣೆ ತರಲಾಗುವುದು. ಇದರಿಂದ ಆರ್ಥಿಕತೆಯು ಸಮತೋಲನದ ವಿಧಾನದಲ್ಲಿ ಬೆಳವಣಿಗೆ ಸಾಧಿಸಲಿದೆ’ ಎಂದು ಹೇಳಿದ್ದಾರೆ.

ಆತ್ಮ ನಿರ್ಭರ್‌ ಭಾರತ್‌: ಸ್ವಾವಲಂಬನೆ ಭಾರತದ ಪರಿಕಲ್ಪನೆಯನ್ನೂ ಮೋದಿ ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ. ಸ್ವಂತದ ಬಳಕೆಯ ಅಗತ್ಯಗಳನ್ನು ಈಡೇರಿಸಿಕೊಂಡು, ಜಾಗತಿಕ ಮಾರುಕಟ್ಟೆಗೂ ಸರಕುಗಳನ್ನು ತಯಾರಿಸುವುದೇ ‘ಆತ್ಮ ನಿರ್ಭರ್‌ ಭಾರತ್‌‘ದ ಪ್ರಮುಖ ಗುಣಲಕ್ಷಣವಾಗಿದೆ. ಆಮದು ತಗ್ಗಿಸುವುದು, ಉತ್ಪಾದನೆ ಹೆಚ್ಚಿಸುವುದು ಪ್ರಮುಖ ವಲಯಗಳಲ್ಲಿ ಇತರರನ್ನು ಅವಲಂಬಿಸದಿರುವುದೂ ಸ್ವಾವಲಂಬನೆಯಾಗಿದೆ. ಜಾಗತಿಕ ಶಕ್ತಿಯಾಗುವಂತೆ ದೇಶಿ ಉದ್ದಿಮೆಗಳನ್ನು ಬಲಪಡಿಸುವುದು, ಉದ್ಯೋಗ ಅವಕಾಶ ಹೆಚ್ಚಿಸುವುದು, ದೇಶದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಜನರನ್ನು ಸಬಲೀಕರಣಗೊಳಿಸುವುದು ಇದಾಗಿದೆ.

‘ಸದ್ಯದ ಪರೀಕ್ಷಾ ಕಾಲ ಘಟ್ಟದಲ್ಲಿ ದೇಶಿ ಕೈಗಾರಿಕಾ ವಲಯವು ಮೈಕೊಡವಿಕೊಂಡು ಎದ್ದು ನಿಲ್ಲಬೇಕು. ಗ್ರಾಮೀಣ ಭಾರತದ ಜತೆ ಪಾಲುದಾರಿಕೆಯಡಿ ಮುನ್ನಡೆಯಬೇಕು. ಸರ್ಕಾರ ಒಂದೆಡೆ ವೈರಾಣು ನಿಯಂತ್ರಿಸಲು ಹೋರಾಡುತ್ತಿದೆ. ಇನ್ನೊಂದೆಡೆ ಆರ್ಥಿಕತೆ ಬಗ್ಗೆಯೂ ಕಾಳಜಿ ತೋರಿಸುತ್ತಿದೆ. ನಾಗರಿಕರ ಜೀವ ರಕ್ಷಣೆ ಮಾಡುವುದರ ಜತೆಗೆ ಆರ್ಥಿಕತೆಯಲ್ಲಿ ಸ್ಥಿರತೆ ಸಾಧಿಸುವುದು ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ.

‘ಸುಧಾರಣೆ ಎಂದರೆ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯ ಮತ್ತು ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಎಂದರ್ಥ’ ಎಂದು ಹೇಳಿದ್ದಾರೆ.‌

ಅಭಿವೃದ್ಧಿ ಮಂತ್ರ
‘ಭಾರತವು ಗರಿಷ್ಠ ಮಟ್ಟದ ಬೆಳವಣಿಗೆಯ ಹಾದಿಗೆ ಮರಳುವುದಕ್ಕೆ ಆಶಯ, ಒಳಗೊಳ್ಳುವಿಕೆ, ಹೂಡಿಕೆ, ಮೂಲ ಸೌಕರ್ಯ ಮತ್ತು ನಾವೀನ್ಯತೆಯ ಮಂತ್ರ ಜಪಿಸಬೇಕಾಗಿದೆ’ ಎಂದೂ ಅವರು ಹೇಳಿದ್ದಾರೆ.

*

ನನ್ನಲ್ಲಿ ವಿಶ್ವಾಸ ಇರಿಸಿ. ದೇಶದ ಆರ್ಥಿಕತೆಯು ಪ್ರಗತಿಯ ಹಾದಿಗೆ ಮರಳುವುದು ಪ್ರಯಾಸಕರವೇನಲ್ಲ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.