ADVERTISEMENT

ಭಯೋತ್ಪಾದನೆ ವಿರುದ್ಧ ಹೋರಾಡಲು ಗಡಿ ದಾಟಲೂ ಹಿಂಜರಿಯಲ್ಲ: ರಾಜನಾಥ್‌ ಸಿಂಗ್

ಪಿಟಿಐ
Published 23 ಏಪ್ರಿಲ್ 2022, 14:02 IST
Last Updated 23 ಏಪ್ರಿಲ್ 2022, 14:02 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ಗುವಾಹಟಿ:ಗಡಿಯಾಚೆಯಿಂದ ದೇಶವನ್ನು ಗುರಿಯಾಗಿಸುವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ತಿಳಿಸಿದರು.

ಭಾರತ– ಪಾಕಿಸ್ತಾನ ಯುದ್ಧದಲ್ಲಿ (1971) ಪಾಲ್ಗೊಂಡಿದ್ದ ಅಸ್ಸಾಂ ಮೂಲದ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಿಂದ ಭಯೋತ್ಪಾದನೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.

‘ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಲಾಗುವುದು ಎಂಬ ಸಂದೇಶವನ್ನು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ಗಡಿಯಾಚೆಯಿಂದ ದೇಶವನ್ನು ಗುರಿಯಾಗಿಸಿಕೊಂಡರೆ, ನಾವು ಗಡಿ ದಾಟಲು ಹಿಂಜರಿಯುವುದಿಲ್ಲ’ ಎಂದು ಅವರು ಎಚ್ಚರಿಸಿದರು.

ADVERTISEMENT

‘ಪಶ್ಚಿಮ ಗಡಿಗೆ ಹೋಲಿಸಿದರೆ ದೇಶದ ಪೂರ್ವ ಗಡಿ ಭಾಗ ಪ್ರಸ್ತುತ ಹೆಚ್ಚು ಶಾಂತಿ ಮತ್ತು ಸ್ಥಿರತೆಯನ್ನು ಅನುಭವಿಸುತ್ತಿದೆ. ಬಾಂಗ್ಲಾದೇಶವು ಸ್ನೇಹಪರ ನೆರೆಯ ರಾಷ್ಟ್ರವಾಗಿದೆ. ಹೀಗಾಗಿ ಇಲ್ಲಿ ಒಳನುಸುಳುವಿಕೆಯು ಬಹುತೇಕ ಅಂತ್ಯವಾಗಿದೆ’ ಎಂದು ಸಿಂಗ್ ತಿಳಿಸಿದರು.

ಈಶಾನ್ಯದ ವಿವಿಧ ಭಾಗಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಇತ್ತೀಚೆಗೆ ಹಿಂತೆಗೆದುಕೊಂಡ ಕುರಿತು ಮಾತನಾಡಿದ ಅವರು,ಪರಿಸ್ಥಿತಿ ಸುಧಾರಿಸಿದ ಪ್ರದೇಶಗಳಲ್ಲಿ ಸರ್ಕಾರವು ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಸೇನೆಯು ಈ ಕಾಯ್ದೆ ಯಾವಾಗಲೂ ಜಾರಿಯಲ್ಲಿ ಇರಬೇಕು ಎಂದು ಬಯಸುತ್ತದೆ ಎಂಬ ತಪ್ಪು ಗ್ರಹಿಕೆ ಸಾರ್ವಜನಿಕರಲ್ಲಿ ಇದೆ. ಆದರೆ ಪರಿಸ್ಥಿತಿಯನ್ನು ಆಧರಿಸಿ ಈ ರೀತಿಯ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆಯೇ ಹೊರತು ಸೇನೆಯ ಕಾರಣಕ್ಕಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.