ADVERTISEMENT

ಹವಾಮಾನ ವೈಪರೀತ್ಯ ತಡೆಗೆ ಮಹತ್ವಾಕಾಂಕ್ಷೆ ಹೆಚ್ಚಿಸಿಕೊಳ್ಳಲಿದೆ ಭಾರತ: ಜಾವಡೇಕರ್‌

ಪಿಟಿಐ
Published 14 ಏಪ್ರಿಲ್ 2021, 9:58 IST
Last Updated 14 ಏಪ್ರಿಲ್ 2021, 9:58 IST
ಪ್ರಕಾಶ್‌ ಜಾವಡೇಕರ್‌
ಪ್ರಕಾಶ್‌ ಜಾವಡೇಕರ್‌   

ನವದೆಹಲಿ: ‘ಹವಾಮಾನ ವೈಪರೀತ್ಯವನ್ನು ತಡೆಯುವ ನಿಟ್ಟಿನಲ್ಲಿ ಭಾರತ ತನ್ನ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಿಕೊಳ್ಳಲಿದೆ. ಆದರೆ, ಯಾವುದೇ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದುಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್–ವೆಸ್‌ ಲೆ ಡ್ರಯಾನ್‌ ಅವರೊಂದಿಗಿನ ಸಭೆ ಬಳಿಕ ಮಾತನಾಡಿದ ಜಾವಡೇಕರ್‌,‘ ಭಾರತವು ಹವಾಮಾನ ಸುಧಾರಣೆಗಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಬಳಿ ಹಣಕಾಸು ಮತ್ತು ಇತರೆ ಸಹಕಾರವನ್ನು ಕೇಳಲಿದೆ. ಅಲ್ಲದೆ ಅವುಗಳು ಅನುಸರಿಸಿದ ಹವಾಮಾನ ಸಂಬಂಧಿತ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ಪಡೆಯಲಿದೆ’ ಎಂದರು.

‘ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿಪ್ಯಾರಿಸ್ ಹವಾಮಾನ ಒಪ್ಪಂದದ ಕುರಿತು ಮಾತುಕತೆ ನಡೆಸಿದ ಏಕೈಕ ದೇಶ ಭಾರತ. ತಾಪಮಾನ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ನಾವು ನೀಡಿದ ಭರವಸೆಗಿಂತ ಹೆಚ್ಚಿನ ಕೆಲಸಗಳನ್ನು ಮಾಡಿದ್ದೇವೆ. ಹಲವು ರಾಷ್ಟ್ರಗಳು 2020ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಆದರೂ 2050ರ ಬಗ್ಗೆ ಮಾತನಾಡುತ್ತಿವೆ’ ಎಂದು ಅವರು ತಿಳಿಸಿದರು.

‘ಇತರ ರಾಷ್ಟ್ರಗಳು ತೆಗೆದುಕೊಂಡ ಕೆಲವೊಂದು ಕ್ರಮಗಳಿಂದಾಗಿ ಭಾರತ ತೊಂದರೆ ಅನುಭವಿಸುತ್ತಿದೆ. ಅಮೆರಿಕ, ಯುರೋಪ್‌ ಮತ್ತು ಚೀನಾ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಮನೆಯ ಅನಿಲವನ್ನು ಬಿಡುಗಡೆ ಮಾಡುತ್ತಿವೆ. ಇದರಿಂದಾಗಿ ಇಡೀ ವಿಶ್ವವೇ ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದು ಅವರು ಹೇಳಿದರು.

‘ಹವಾಮಾನ ವಿಷಯದಲ್ಲಿ ಬಡ ರಾಷ್ಟ್ರಗಳು ಪ್ರಸ್ತಾಪಿಸುವ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅವರಿಗೂ ಅಭಿವೃದ್ಧಿ ಹೊಂದುವ ಹಕ್ಕಿದೆ. ಅಭಿವೃದ್ಧಿ ಹೊಂದಿದ ದೇಶಗಳು ಅದಕ್ಕಾಗಿ ಹಣಕಾಸಿನ ನೆರವನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.