ನವದೆಹಲಿ: ಭಾರತದ ಜತೆ ಮಾತುಕತೆ ನಡೆಸಬೇಕು ಎಂಬ ವಿಚಾರದಲ್ಲಿ ಪಾಕಿಸ್ತಾನ ಗಂಭೀರವಾಗಿದ್ದರೆ, ಅದು ವಿಶ್ವಸಂಸ್ಥೆಯ ‘ಜಾಗತಿಕ ಉಗ್ರ’ರ ಪಟ್ಟಿಯಲ್ಲಿರುವ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಗೋವಾದಲ್ಲಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ನೌಕಾ ಯೋಧರ ಜತೆಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಭಯೋತ್ಪಾದಕ ಸಂಘಟನೆಯಾದ ‘ಲಷ್ಕರ್–ಎ–ತಯಬಾ’ದ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ‘ಜೈಷ್–ಎ–ಮೊಹಮ್ಮದ್’ನ ಮುಖ್ಯಸ್ಥ ಮಸೂದ್ ಅಜರ್ ಸಾಕಷ್ಟು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದಾರೆ. ಅವರ ಈ ಕೃತ್ಯಗಳಿಂದ ಸಂತ್ರಸ್ತರಾದವರಿಗೆ ನ್ಯಾಯ ದೊರಕಿಸಬೇಕಿದೆ. ಹೀಗಾಗಿ ಅವರನ್ನು ಭಾರತಕ್ಕೆ ಒಪ್ಪಿಸಿ ಎಂದು ಸಿಂಗ್ ಆಗ್ರಹಿಸಿದರು.
ಭಾರತದ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರ ಪಟ್ಟಿಯಲ್ಲಿ ಇರುವ ಇವರಿಬ್ಬರು ವಿಶ್ವಸಂಸ್ಥೆಯ ಜಾಗತಿಕ ಉಗ್ರ ಪಟ್ಟಿಯಲ್ಲೂ ಇದ್ದಾರೆ ಎಂದು ಸಿಂಗ್ ತಿಳಿಸಿದರು. ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಇತ್ತೀಚೆಗೆ ಭಾರತಕ್ಕೆ ಕರೆತರಲಾಗಿದೆ. ಮುಂಬೈ ದಾಳಿಯಲ್ಲಿ ಹಫೀಜ್ ಸಯೀದ್ ಕೂಡ ತಪ್ಪಿತಸ್ಥ ಎಂದು ಅವರು ಹೇಳಿದರು.
ಪಾಕ್‌ಗೆ ಎಚ್ಚರಿಕೆ: ‘ಪಾಕಿಸ್ತಾನ ಯೋಚಿಸಲೂ ಸಾಧ್ಯವಾಗದ ವಿಧಾನಗಳ ಮೂಲಕ ಭಾರತವು ಭಯೋತ್ಪಾದನೆ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಸಚಿವ ರಾಜನಾಥ ಸಿಂಗ್ ಅವರು ಇಸ್ಲಾಮಾಬಾದ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತ ಎಲ್ಲ ರೀತಿಯ ಕಾರ್ಯತಂತ್ರಗಳನ್ನು ರೂಪಿಸಲಿದೆ ಎಂದರು.
‘ಪಾಕಿಸ್ತಾನದ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಮುಕ್ತವಾಗಿ ನಡೆಯುತ್ತಿವೆ. ಹೀಗಾಗಿ ಭಾರತವು ಭಯೋತ್ಪಾದಕರ ವಿರುದ್ಧ ಗಡಿ ಆಚೆ ಮತ್ತು ಗಡಿ ಒಳಗೆ ಹಾಗೂ ಸಮುದ್ರದಿಂದ ಕಾರ್ಯಾಚರಣೆ ನಡೆಸಲು ಸಂಪೂರ್ಣ ಮುಕ್ತವಾಗಿದೆ’ ಎಂದು ಅವರು ತಿಳಿಸಿದರು.
ನೌಕಾದಳಕ್ಕೆ ಮೆಚ್ಚುಗೆ:
ಆಪರೇಷನ್ ಸಿಂಧೂರ್ ವೇಳೆ ಭಾರತೀಯ ನೌಕಾದಳವು ಮಹತ್ವದ ಕಾರ್ಯ ನಿರ್ವಹಿಸಿದೆ ಎಂದು ರಕ್ಷಣಾ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಈ ಕಾರ್ಯಾಚರಣೆ ವೇಳೆ ನೌಕಾದಳವು ಮೌನವಾಗಿ ಸಲ್ಲಿಸಿದ ಸೇವೆಗೆ ಭಾರತೀಯರೆಲ್ಲರೂ ಪ್ರಭಾವಿತರಾಗಿದ್ದಾರೆ. ಪಾಕ್ ನೆಲದಲ್ಲಿನ ಭಯೋತ್ಪಾದಕ ನೆಲೆಗಳನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸುತ್ತಿದ್ದಾಗ, ಭಾರತೀಯ ನೌಕಾದಳವು ಅರಬ್ಬಿ ಸಮುದ್ರದಲ್ಲಿ, ಪಾಕಿಸ್ತಾನದ ನೌಕೆಗಳು ಎಲ್ಲೆ ಮೀರದಂತೆ ನೋಡಿಕೊಂಡವು. ಇದು ಪಾಕ್‌ನ ಸಶಸ್ತ್ರ ಪಡೆಗಳನ್ನು ಕಟ್ಟಿಹಾಕುವಂತೆ ಮಾಡಿತು’ ಎಂದು ಅವರು ವಿವರಿಸಿದರು.
‘ನೌಕಾಪಡೆ ಪ್ರತ್ಯುತ್ತರ ನೀಡುತ್ತೆ’
ಪಾಕಿಸ್ತಾನ ಭವಿಷ್ಯದಲ್ಲಿ ಮಾಡಬಹುದಾದ ಯಾವುದೇ ದಾಳಿಗೆ ಭಾರತದ ನೌಕಾಪಡೆ ಪ್ರತ್ಯುತ್ತರ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಪಾಕಿಸ್ತಾನವು ಯಾವುದೇ ರೀತಿಯ ದುಷ್ಟ ಅಥವಾ ಅನೈತಿಕ ಕೃತ್ಯಕ್ಕೆ ಮುಂದಾದರೆ ಭಾರತೀಯ ನೌಕಾಪಡೆಯ ಶಕ್ತಿ ಮತ್ತು ಕೋಪವನ್ನು ಅದು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.