ADVERTISEMENT

ಎಫ್‌ಐಪಿಎ ಸಂಘದಿಂದ ಭಾರತಕ್ಕೆ 5 ಸಾವಿರ ಆಮ್ಲಜನಕ ಕಾನ್ಸನ್‌ಟ್ರೇಟರ್‌ ರವಾನೆ

ಅಮೆರಿಕದಲ್ಲಿರುವ ಭಾರತೀಯ ಶಸ್ತ್ರಚಿಕಿತ್ಸಕ ಸಂಘದ ನೆರವು

ಪಿಟಿಐ
Published 8 ಮೇ 2021, 5:45 IST
Last Updated 8 ಮೇ 2021, 5:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಅಮೆರಿಕಲ್ಲಿರುವ ಭಾರತೀಯ ಶಸ್ತ್ರಚಿಕಿತ್ಸಕರ ಸಂಘ (ಎಫ್‌ಐಪಿಎ) 5 ಸಾವಿರ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಭಾರತಕ್ಕೆ ರವಾನಿಸುತ್ತಿದೆ.

ಭಾರತಕ್ಕೆ ಕಳುಹಿಸುವುದಕ್ಕಾಗಿಯೇ ಸಂಘ ಶುಕ್ರವಾರವೇ 5 ಸಾವಿರ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಖರೀದಿಸಿತ್ತು. ಇವುಗಳಲ್ಲಿ 450 ಕಾನ್ಸನ್‌ಟ್ರೇಟರ್‌ಗಳು ಈಗಾಗಲೇ ಅಹ್ಮದಾಬಾದ್‌ ತಲುಪಿವೆ. 325 ಘಟಕಗಳು ದೆಹಲಿಗೆ ಹಾಗೂ 300 ಘಟಕಗಳು ಮುಂಬೈಗಳಿಗೆ ತಲುಪುವ ಹಾದಿಯಲ್ಲಿವೆ.

‘ಭಾರತದಲ್ಲಿರುವ ನಮ್ಮ ಪಾಲುದಾರರು, ಆಸ್ಪತ್ರೆಗಳು, ತಾತ್ಕಾಲಿಕ ಐಸೊಲೇಷನ್ ಕೇಂದ್ರಗಳು, ಹೊಸದಾಗಿ ರಚಿಸಲಾಗಿರುವ ಸಂಚಾರಿ ಆಸ್ಪತ್ರೆಗಳು ಮತ್ತು ಚಾರಿಟಿಗಳು ಈ ಘಟಕಗಳನ್ನು ಸ್ವೀಕರಿಸಬೇಕು. ಸ್ಥಳೀಯ ಪಾಲುದಾರರ ಇವುಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕವನ್ನು ಒದಗಿಸಬಹುದು‘ ಎಂದು ಎಫ್‌ಐಪಿಎ ಅಧ್ಯಕ್ಷ ಡಾ. ರಾಜ್ ಭಯಾನಿ ತಿಳಿಸಿದ್ದಾರೆ.

ADVERTISEMENT

‘ಇನ್ನೂ 3500 ಘಟಕಗಳು ಸಾಗಾಟಕ್ಕೆ ಸಿದ್ಧವಾಗಿದ್ದು, ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ತಲುಪಿವೆ. ಈ ಘಟಕಗಳನ್ನು ಸಾಗಾಟ ಮಾಡಲು ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಸಹಾಯ ಮಾಡುತ್ತದೆ‘ ಎಂದು ರಾಜ್‌ ಹೇಳಿದರು.

ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಯೋವಾ ಮೂಲದ ಸ್ವಯಂ ಸೇವಾ ಸಂಸ್ಥೆ ಸೆಹಗಲ್ ಫೌಂಡೇಷನ್, 200 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಭಾರತಕ್ಕೆ ಕಳುಹಿಸುತ್ತಿರುವುದಾಗಿ ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ. ‘ಕೋವಿಡ್‌ ಬಿಕ್ಕಟ್ಟಿನಿಂದ ಸಂಕಷ್ಟ ಎದುರಿಸುತ್ತಿರುವ ಭಾರತದಲ್ಲಿರುವ ಜನರಿಗೆ ದಣಿವರಿಯದೇ ಸಹಾಯ ಮಾಡುತ್ತಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.