ADVERTISEMENT

‘ಭಾರತೀಯ ಸೇನೆ ಮೋದಿ ಸೇನೆ’

ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿಕೆ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:25 IST
Last Updated 1 ಏಪ್ರಿಲ್ 2019, 20:25 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಗಾಜಿಯಾಬಾದ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರುಭಾರತೀಯ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದಿದ್ದಾರೆ. ಯೋಗಿ ಅವರ ಈ ಹೇಳಿಕೆಯನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಟಿಎಂಸಿ ಖಂಡಿಸಿವೆ. ಇದು ಸೇನೆಗೆ ಮಾಡಿದ ಅಪಮಾನ ಎಂದು ಆರೋಪಿಸಿವೆ.

ಗಾಜಿಯಾಬಾದ್‌ನಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಭಾನುವಾರ ಮಾತನಾಡಿದ ಯೋಗಿ ಅವರು, ‘ಕಾಂಗ್ರೆಸ್‌ನವರು ಭಯೋತ್ಪಾದರಿಗೆ ಬಿರಿಯಾನಿ ನೀಡಿ ಸತ್ಕರಿಸಿದರೆ, ಮೋದಿ ಉಗ್ರರಿಗೆ ಗುಂಡು ಹೊಡೆದು ತಿರುಗೇಟು ನೀಡಿದ್ದಾರೆ. ಇದೇ ವ್ಯತ್ಯಾಸ. ಉಗ್ರ ಮಸೂದ್‌ಗೆ ಕಾಂಗ್ರೆಸ್‌ನವರು ‘ಜೀ’ ಎಂದು ಸಂಬೋಧಿಸುತ್ತಾರೆ. ಆದರೆ ಭಯೋತ್ಪಾದಕರ ವಿರುದ್ಧ ಬಿಜೆಪಿಗೆ ಇರುವುದು ಎರಡೇ ಆಯ್ಕೆ. ಗುಂಡು ಅಥವಾ ಬಾಂಬ್’ ಎಂದು ಯೋಗಿ ಹೇಳಿದ್ದಾರೆ.

‘ಕಾಂಗ್ರೆಸ್‌ಗೆ ಯಾವುದು ಅಸಾಧ್ಯ ಎನಿಸಿತ್ತೋ, ಮೋದಿ ಅವರಿಂದ ಅದು ಸಾಧ್ಯವಾಗಿದೆ. ಏಕೆಂದರೆ ಮೋದಿ ಅವರು ಇದ್ದರೆ, ಅಸಾಧ್ಯವೆನಿಸಿದ್ದೂ ಸಾಧ್ಯವಾಗಿಬಿಡುತ್ತದೆ’ ಎಂದು ಆದಿತ್ಯನಾಥ ಹೇಳಿದ್ದಾರೆ.

ADVERTISEMENT

‘ಮೋದಿ ಅವರ ನಾಯಕತ್ವದಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಯಿತು. ಬಾಲಾಕೋಟ್ ದಾಳಿಯ ಬಳಿಕ ಪಾಕಿಸ್ತಾನವು ಉಗ್ರರ ಹೆಣ ಎಣಿಸುತ್ತಿದೆ. ಇದೇ ವೇಳೆ ನಮ್ಮ ಪ್ರತಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷಮೆಗೆ ಕಾಂಗ್ರೆಸ್ ಪಟ್ಟು: ಸೇನೆಯ ಕುರಿತು ಯೋಗಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ.

‘ಇದು ಸೇನೆಗೆ ಮಾಡಿದ ಅವಮಾನ. ಭಾರತೀಯ ಸೇನೆಯು ಪ್ರಚಾರ ಮಂತ್ರಿಯ ಖಾಸಗಿ ಸೊತ್ತಲ್ಲ. ಆದಿತ್ಯನಾಥ ತಕ್ಷಣ ಕ್ಷಮೆ ಕೇಳಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಪ್ರಯಾಣಿಕರನ್ನು ಉಳಿಸಿಕೊಳ್ಳಲು ಅಂದಿನ ಬಿಜೆಪಿ ಸರ್ಕಾರ ಉಗ್ರರ ಹಸ್ತಾಂತರ ಮಾಡಿತು. ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅಂದಿನ ಐ.ಬಿ. ಹೆಚ್ಚುವರಿ ನಿರ್ದೇಶಕರಾಗಿದ್ದ ಅಜಿತ್ ಡೊಭಾಲ್ ಅವರು ಉಗ್ರರನ್ನು ಸುರಕ್ಷಿತವಾಗಿ ಅವರ ದೇಶಕ್ಕೆ ಕಳುಹಿಸಿ ಬಂದರು. ಇದಕ್ಕೆ ಏನು ಹೇಳುತ್ತೀರಿ’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಯೋಗಿ ಅವರ ಹೇಳಿಕೆಯ ಬಗ್ಗೆ ಸೇನೆಯ ಅಧಿಕಾರಿಗಳೂ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ರಕ್ಷಣಾ ಸಚಿವಾಲಯದ ಗಮನಕ್ಕೆ ತಂದಿದ್ದಾರೆಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸಲು ಸೇನೆಯ ವಿಚಾರವನ್ನು ಎಳೆದು ತರುವುದು ಸರಿಯಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ. ‘ಸೇನೆ ನಡೆಸಿದ ವಾಯುದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಕ್ಷದ ಮುಖಂಡರೊಬ್ಬರು ಆಗ್ರಹಿಸಿದ್ದಾರೆ.

ಬಿಸಾಡದಲ್ಲಿ ಗೋಮಾಂಸ ತಿಂದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ ಪ್ರಕರಣದ ಮುಖ್ಯ ಆರೋಪಿ ವಿಶಾಲ್ ಸಿಂಗ್, ಯೋಗಿ ಅವರ ರ‍್ಯಾಲಿಯಲ್ಲಿ ಮೊದಲ ಸಾಲಿನಲ್ಲೇ ಕುಳಿತಿದ್ದಕ್ಕೆ ಸಮಾಜವಾದಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

‘ಥಳಿತ ಪ್ರಕರಣದ ಬಗ್ಗೆ ಬಿಜೆಪಿಗೆ ಕಿಂಚಿತ್ತೂ ಚಿಂತೆಯಿಲ್ಲ. ಅಂತಹ ವ್ಯಕ್ತಿಯನ್ನು ಬಳಸಿಕೊಂಡು ಚುನಾವಣೆಯನ್ನು ಗೆಲ್ಲಲು ಹೊರಟಿದೆ’ ಎಂದು ಎಸ್‌ಪಿ ಆರೋಪಿಸಿದೆ.

‘ಭಾರತೀಯ ಸೇನೆಯು ಬಿಜೆಪಿಯ ಕ್ಯಾಸೆಟ್ ಅಲ್ಲ’:ಮಮತಾ ಬ್ಯಾನರ್ಜಿ

ಕೋಲ್ಕತ್ತ: ಭಾರತೀಯ ಸೇನೆ ಹಾಗೂ ರಿಸರ್ವ್ ಬ್ಯಾಂಕ್‌ ಘನತೆಗೆ ಕುಂದು ತರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಭಾರತೀಯ ಸೇನೆಯನ್ನು ಮೋದಿ ಸೇನಾ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಭಾರತೀಯ ಸೇನೆಯು ಬಿಜೆಪಿಯ ಕ್ಯಾಸೆಟ್ ಅಲ್ಲ. ಯೋಗಿ ಆದಿತ್ಯನಾಥ ಅವರ ಹೇಳಿಕೆ ಆಘಾತಕಾರಿ. ಈ ರೀತಿ ನಮ್ಮ ಹೆಮ್ಮೆಯ ಸೇನೆಯನ್ನು ಅತಿಕ್ರಮಿಸುವುದು ಸೇನೆಗೆ ಮಾಡಿದ ಅಪಮಾನ. ಇಡೀ ದೇಶದ ಜನರು ಯೋಗಿ ಅವರ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಬೇಕು’ ಎಂದುಮಮತಾ ಆಗ್ರಹಿಸಿದ್ದಾರೆ.

‘1935ರ ಏಪ್ರಿಲ್ 1ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಸಂದರ್ಭದಲ್ಲಿ ಆರ್‌ಬಿಐ ಸಿಬ್ಬಂದಿಗೆ ಶುಭ ಕೋರುತ್ತೇನೆ. ಆರ್‌ಬಿಐ ಘನತೆಗೆ ಕುತ್ತು ಬಂದಿರುವುದನ್ನು ಇತ್ತೀಚಿನ ದಿನಗಳಲ್ಲಿ ಗಮನಿಸಿದ್ದೇವೆ. ಇಂತಹ ಉನ್ನತ ಸಂಸ್ಥೆಗಳ ಪಾವಿತ್ರ್ಯವನ್ನು ಮರಳಿ ಸ್ಥಾಪಿಸಬೇಕಿದೆ’ ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.