ADVERTISEMENT

ಭಾರತಕ್ಕೆ ಮರಳಿದ ಗಗನಯಾನಿ ಶುಭಾಂಶು ಶುಕ್ಲಾ: ಭವ್ಯ ಸ್ವಾಗತ

ಪಿಟಿಐ
Published 17 ಆಗಸ್ಟ್ 2025, 2:58 IST
Last Updated 17 ಆಗಸ್ಟ್ 2025, 2:58 IST
ಶುಭಾಂಶು ಶುಕ್ಲಾ
ಶುಭಾಂಶು ಶುಕ್ಲಾ   

ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಇತ್ತೀಚೆಗಷ್ಟೆ ವಾಪಸಾದ ಗಗನಯಾನಿ ಶುಭಾಂಶು ಶುಕ್ಲಾ ಅವರು ಭಾನುವಾರ ಮುಂಜಾನೆ ಭಾರತಕ್ಕೆ ಬಂದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಕೈಯಲ್ಲಿ ತ್ರಿವರ್ಣ ಧ್ವಜ ಬೀಸುತ್ತಿದ್ದ ಅಪಾರ ಸಂಖ್ಯೆಯ ಜನರು ಅವರಿಗೆ ಭವ್ಯ ಸ್ವಾಗತ ನೀಡಿದರು. 

ಜೂನ್ 25ರಿಂದ ಜುಲೈ 15ರವರೆಗೆ ‘ಆಕ್ಸಿಯಂ–4’ರ ಭಾಗವಾಗಿ ಬಾಹ್ಯಾಕಾಶದಲ್ಲಿ ಕಳೆದಿದ್ದ ಶುಭಾಂಶು ಅವರು, ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಭಾಂಶು ಮತ್ತು ಅವರ ಪ‍ರ್ಯಾಯ ಎಂದು ಗುರುತಿಸಲಾಗಿದ್ದ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ADVERTISEMENT

‌ಬಾಹ್ಯಾಕಾಶ ಹಾರಾಟದ ತರಬೇತಿಯಲ್ಲಿ ಸುಮಾರು ಒಂದು ವರ್ಷ ಕಳೆದ ನಂತರ ಮನೆಗೆ ಬರುತ್ತಿರುವ ಶುಭಾಂಶು ಅವರನ್ನು ಸ್ವಾಗತಿಸಲು ಅವರ ಪತ್ನಿ ಕಾಮ್ನಾ ಮತ್ತು ಮಗ ಕಿಯಾಶ್ ಕೂಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ತಮ್ಮನ್ನು ಸ್ವಾಗತಿಸಿದ ಜಿತೇಂದ್ರ ಸಿಂಗ್‌ ಅವರಿಗೆ ಶುಭಾಂಶು ‘ಎಕ್ಸ್‌’ನಲ್ಲಿ ಧನ್ಯವಾದ ಹೇಳಿದ್ದಾರೆ. 

ಸೋಮವಾರ ಲೋಕಸಭಾ ಕಲಾಪದಲ್ಲಿ ಶುಭಾಂಶು ಅವರ ಸಾಧನೆ ಕುರಿತು ಮಾತನಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದೇ ದಿನ ಶುಭಾಂಶು ಭೇಟಿಯಾಗುವ ನಿರೀಕ್ಷೆ ಇದ್ದು, ನಂತರ ತಮ್ಮ ತವರು ಲಖನೌಗೆ ತೆರಳಲಿದ್ದಾರೆ. ಆಗಸ್ಟ್‌ 22–23ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದೆ. 

ವಿಮಾನ ಹತ್ತಿ ಅಲ್ಲಿಂದ ಹೊರಡಬೇಕಿದ್ದರೆ ಗೆಳೆಯರು ಕುಟುಂಬ ಮತ್ತು ಇಲ್ಲಿನ ಎಲ್ಲರನ್ನೂ ನೋಡಲು ಕಾತರನಾಗಿದ್ದೆ
ಶುಭಾಂಶು ಶುಕ್ಲಾ ಗಗನಯಾನಿ.

ಇದಾದ ನಂತರ ದೆಹಲಿಯಲ್ಲಿ ಆ. 22 ಹಾಗೂ 23ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ

2027ರಲ್ಲಿ ಇಸ್ರೊ ಕೈಗೊಳ್ಳಲು ಉದ್ದೇಶಿಸಿರುವ ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಾಸಾ ಜತೆಗೂಡಿ ನಡೆಸಿದ ಮಾನವ ಸಹಿತ ಬಾಹ್ಯಾಕಾಶ ಯಾನದಲ್ಲಿ ಶುಭಾಂಶು ಶುಕ್ಲ ಅವರು ಇತರ ಮೂವರು ಗಗನಯಾನಿಗಳೊಂದಿಗೆ ಪಾಲ್ಗೊಂಡಿದ್ದರು.

ಭಾರತದ ಆದರ್ಶ ಪುತ್ರ, ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗಿನ ಜಾವ ದೆಹಲಿಗೆ ಬಂದಿಳಿದರು. ಇವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಮರಳಿದರು. ಎಂದು ಜಿತೇಂದ್ರ ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.