ADVERTISEMENT

ಲಸಿಕೆ ನೀಡಲು 3 ಗಂಟೆ ಬೆಟ್ಟಗುಡ್ಡಗಳಲ್ಲಿ ನಡೆದು ಹಿಮಾಲಯದ ಹಳ್ಳಿಗೆ ತಲುಪಿದರು!

ರಾಯಿಟರ್ಸ್
Published 24 ಸೆಪ್ಟೆಂಬರ್ 2021, 4:58 IST
Last Updated 24 ಸೆಪ್ಟೆಂಬರ್ 2021, 4:58 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ಶಿಮ್ಲಾ: ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. ಆದರೆ, ಹಿಮಾಲಯದ ತಪ್ಪಲಿನ ಪ್ರದೇಶಗಳಿಗೆ ತಲುಪುವುದು ಆರೋಗ್ಯ ಕಾರ್ಯಕರ್ತರಿಗೆ ಸವಾಲೇ ಸರಿ. ಹಿಮಾಲಯದ ಮಲಾನಾ ಎಂಬ ಗ್ರಾಮಕ್ಕೆ ತೆರಳುತ್ತಿದ್ದ ವೈದ್ಯಕೀಯ ಸಿಬ್ಬಂದಿ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಕಡಿದಾದ ದಾರಿಯಲ್ಲಿ ಬೆಟ್ಟಗುಡ್ಡಗಳ ಮೇಲೆ ಮೂರು ಗಂಟೆಗಳ ಪಾದಯಾತ್ರೆ ಮಾಡಿ ತಲುಪಿರುವ ಬಗ್ಗೆ ವರದಿಯಾಗಿದೆ.

ಪ್ರತಿಕೂಲ ಭೂಪ್ರದೇಶದ ಹೊರತಾಗಿಯೂ, ಹಿಮಾಚಲ ಪ್ರದೇಶದ ಮಲಾನಾ ಹಳ್ಳಿಗೆ ತೆರಳಿದ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಮೂಲಕ ತಿಂಗಳ ಆರಂಭಕ್ಕೆ ಮಲಾನ ಗ್ರಾಮವು, ಎಲ್ಲ ವಯಸ್ಕರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಖ್ಯಾತಿಗೆ ಪಾತ್ರವಾಗಿತ್ತು.

ಹಿಮಾಚಲ ಪ್ರದೇಶದ ಕಡಿದಾದ ಭೂಪ್ರದೇಶವು ಆರೋಗ್ಯ ಕಾರ್ಯಕರ್ತರಿಗೆ ಒಂದು ಸವಾಲಾಗಿದ್ದು, ದೂರವಿರುವ ಹಳ್ಳಿಗಳನ್ನು ತಲುಪಲು ಗಂಟೆಗಟ್ಟಲೆ ಅಥವಾ ದಿನಗಳವರೆಗೆ ಆಗುತ್ತಿದೆ.

ADVERTISEMENT

ಧಾರ್ಮಿಕ ನಂಬಿಕೆಗಳು ಮತ್ತು ಪ್ರವಾಸೋದ್ಯಮ ಅವಲಂಬಿತ ಹಿಮಾಚಲ ಪ್ರದೇಶದಲ್ಲಿ ಈ ವರೆಗೆ ಸರಿಸುಮಾರು 50 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.

ಸೆಪ್ಟೆಂಬರ್ 14 ರಂದು, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅತುಲ್ ಗುಪ್ತ ನೇತೃತ್ವದ ಐವರ ತಂಡವು ಎರಡನೇ ಲಸಿಕೆ ಡೋಸ್‌ಗಳನ್ನು ನೀಡಲು ಮಲಾನಾಗೆ ಹೊರಟಿತ್ತು.

ಈ ವೇಳೆ, ಭೂಕುಸಿತದಿಂದ ರಸ್ತೆ ಬಂದ್ ಆಗಿತ್ತು. ಹಾಗಾಗಿ, ವಾಹನಗಳನ್ನು ಅಲ್ಲಿಯೇ ಬಿಟ್ಟು ಲಸಿಕೆ ಪೆಟ್ಟಿಗೆಗಳನ್ನು ಹೆಗಲಿಗೆ ಹಾಕಿಕೊಂಡು ಬೆಟ್ಟಗುಡ್ಡಗಳನ್ನು ಹತ್ತಿ ಹಳ್ಳಿಯತ್ತ ಮುನ್ನಡೆದರು. ಕಷ್ಟಪಟ್ಟು ನದಿ ದಾಟಿ ಊರು ಸೇರಿದರು.

ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಗುಪ್ತ ಅವರ ತಂಡವು ಮಲಾನಾದ 1,100 ವಯಸ್ಕರಿಗೆ ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಲು, ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಅರ್ಚಕರನ್ನು ಕರೆದುಕೊಂಡು ಹೋಗಿದ್ದರಂತೆ. ಹಾಗಾಗಿ, ಮೂರು ದಿನಗಳಲ್ಲಿ 700 ಜನರಿಗೆ ಲಸಿಕೆ ಹಾಕಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ 14 ರಂದು ಗುಪ್ತ ಅವರ ತಂಡವು ಗ್ರಾಮವನ್ನು ತಲುಪಿದಾಗ, ಆಮಂತ್ರಣಕ್ಕೆ ಮುಂಚಿತವಾಗಿಯೇ ಮೊದಲ ಡೋಸ್ ಪಡೆದಿದ್ದ ಸುಮಾರು ಮೂರು ಡಜನ್ ಜನರು, ಪುರಾತನ ದೇವಾಲಯದ ಎದುರಿನಲ್ಲಿ ತಮ್ಮ ಎರಡನೇ ಡೋಸ್ ಲಸಿಕೆ ಪಡೆಯಲು ಸಾಲುಗಟ್ಟಿ ನಿಂತಿದ್ದರು.

‘ಆರಂಭದಲ್ಲಿ ಲಸಿಕೆ ತೆಗೆದುಕೊಳ್ಳಲು ಜನರು ಹೆದರುತ್ತಿದ್ದರು. ಅದರಿಂದ ಅನಾರೋಗ್ಯಕ್ಕೆ ಒಳಗಾಗುವ ಅಥವಾ ಸಾವಿಗೀಡಾಗುವ ಆತಂಕ ಅವರಿಗಿತ್ತು’ಎಂದು ಗ್ರಾಮದ ಮುಖ್ಯಸ್ಥ ರಾಜುರಾಮ್ ಹೇಳಿದರು, ಲಸಿಕೆ ಭಯದಿಂದ ಜನರು ಮರಗಳು ಮತ್ತು ಗೋಡೆಗಳನ್ನು ಹತ್ತಿ ಕುಳಿತಿದ್ದರು. ಬಳಿಕ, ಒಬ್ಬೊಬ್ಬರಿಗೇ ಧೈರ್ಯ ತುಂಬಿ ಕರೆತಂದು ಲಸಿಕೆ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ರಾಜ್ಯದ ಹಳ್ಳಿ ಹಳ್ಳಿಗೂ ಲಸಿಕೆ ಅಭಿಯಾನ ತಲುಪಲು ಉತ್ತೇಜನ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.