ADVERTISEMENT

ಚುನಾವಣೆ ಸಮಯದಲ್ಲಿ ಹಣ ಹಂಚುವುದರಿಂದ ಕಲ್ಯಾಣವಾಗದು: ಮುರಳಿ ಮನೋಹರ್ ಜೋಶಿ

ಪಿಟಿಐ
Published 21 ನವೆಂಬರ್ 2025, 5:24 IST
Last Updated 21 ನವೆಂಬರ್ 2025, 5:24 IST
ಮುರಳಿ ಮನೋಹರ ಜೋಶಿ
ಮುರಳಿ ಮನೋಹರ ಜೋಶಿ   

ನವದೆಹಲಿ: ‘ಸಂವಿಧಾನದ ಆಶಯವನ್ನು ಪೂರೈಸಲು ಎಲ್ಲಾ ರಾಜ್ಯಗಳ ಆರ್ಥಿಕ ಸಮಾನತೆ ಮತ್ತು ಸಮಾನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದಿರುವ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, ಚುನಾವಣೆ ಸಮಯದಲ್ಲಿ ಹಣ ಹಂಚುವುದರಿಂದ ಕಲ್ಯಾಣವಾಗುವುದಿಲ್ಲ’ ಎಂದು ಹೇಳಿದ್ದಾರೆ.

ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ತಾರತಮ್ಯವನ್ನು ಕೊನೆಗೊಳಿಸಲು ದೇಶದಲ್ಲಿ ರಾಜ್ಯಗಳನ್ನು ಪುನರ್‌ ರಚಿಸಬೇಕು. ಅವುಗಳು ಪ್ರತಿಯೊಂದರಲ್ಲೂ ಸಮಾನತೆ ಹೊಂದಿರಬೇಕು. ಕ್ಷೇತ್ರಗಳ ಗಾತ್ರ, ಅಲ್ಲಿನ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡು ಸಣ್ಣ ರಾಜ್ಯಗಳನ್ನು ರಚಿಸುವ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕ ಸಮಾನ ಮತದಾನದ ಹಕ್ಕು ಹೊಂದಿದ್ದಾನೆ. ಆದರೆ ಕರ್ನಾಟಕ, ಬಿಹಾರ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಾಸಿಸುವ ಜನರ ನಡುವೆ ಆರ್ಥಿಕ ಸ್ಥಿತಿಯಲ್ಲಿ ಭಾರಿ ವ್ಯತ್ಯಾಸವಿದೆ’ ಎಂದರು.

‘ಕರ್ನಾಟಕದಲ್ಲಿ, ಒಬ್ಬ ವ್ಯಕ್ತಿಯ ಆರ್ಥಿಕ ಬಲ ಏನು? ಅವನು ನಿರ್ದಿಷ್ಟ ಆರ್ಥಿಕ ಬಲದಿಂದ ಮತ ಚಲಾಯಿಸುತ್ತಾನೆ..ಆದರೆ ದೇಶದ ವಿವಿಧ ಭೌಗೋಳಿಕ ಪರಿಸರವಾದ ಮರುಭೂಮಿ, ಗುಡ್ಡಗಾಡು ಅಥವಾ ಈಶಾನ್ಯದ ರಾಜ್ಯಗಳಲ್ಲಿರುವ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಯೂ ಒಂದೇ ರೀತಿಯಾಗಿದೆಯೇ? ಎಂದು ಪ್ರಶ್ನಿಸಿದರು.

ADVERTISEMENT

ಸಂವಿಧಾನವು ಆರ್ಥಿಕ ಮತ್ತು ರಾಜಕೀಯ ನ್ಯಾಯದ ಹಕ್ಕನ್ನು ಒದಗಿಸುತ್ತದೆ. ರಾಜಕೀಯ ಹಕ್ಕಿಗಾಗಿ, ಮತದಾನದ ಹಕ್ಕನ್ನು ನೀಡಲಾಗಿದೆ. ಆದರೆ ಒಬ್ಬ ವ್ಯಕ್ತಿಗೆ ಆರ್ಥಿಕ ನ್ಯಾಯ ಸಿಗದ ಹೊರತು ಈ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಕೂಡ ಇದರ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.