ADVERTISEMENT

ರಫೇಲ್ ಹಗರಣದಲ್ಲಿ ಅಂಬಾನಿ ಪರ ಮೋದಿ ಲಾಬಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್

ಏಜೆನ್ಸೀಸ್
Published 21 ಸೆಪ್ಟೆಂಬರ್ 2018, 19:25 IST
Last Updated 21 ಸೆಪ್ಟೆಂಬರ್ 2018, 19:25 IST
ಫ್ರಾಂಸ್ವಾ ಒಲಾಂಡ್‌
ಫ್ರಾಂಸ್ವಾ ಒಲಾಂಡ್‌    

ನವದೆಹಲಿ:ಡಸಾಲ್ಟ್‌ ಕಂಪನಿ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಸಲು ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನೇದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಹೇಳಿದ್ದಾರೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಗಿರುವ ಈ ಒಪ್ಪಂದಕ್ಕೆ ಸಂಬಂಧಿಸಿ ಒಲಾಂಡ್‌ ನೀಡಿರುವ ಹೇಳಿಕೆ ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಕೊಟ್ಟಿದೆ.

ಒಲಾಂಡ್‌ ಅವರ ಹೇಳಿಕೆಯನ್ನು ಫ್ರಾನ್ಸ್‌ನ ಮಾಧ್ಯಮ ‘ಮಿಡಿಯಾಪಾರ್ಟ್‌’ ಪ್ರಕಟಿಸಿದೆ.

ADVERTISEMENT

‘ರಫೇಲ್‌ ಒಪ್ಪಂದದಲ್ಲಿ ದೇಶೀ ಪಾಲುದಾರನಾಗಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ವಿಚಾರದಲ್ಲಿ ನಮಗೆ ಯಾವುದೇ ಆಯ್ಕೆ ಇರಲಿಲ್ಲ. ಈ ಕಂಪನಿಯನ್ನು (ರಿಲಯನ್ಸ್‌ ಡಿಫೆನ್ಸ್‌) ಪಾಲುದಾರನಾಗಿ ಸೇರಿಸಿಕೊಳ್ಳುವಂತೆ ಭಾರತ ಸರ್ಕಾರ ಹೇಳಿತು. ಹಾಗಾಗಿ ಅನಿಲ್‌ ಅಂಬಾನಿ ಜತೆಗೆ ಡಸಾಲ್ಟ್‌ ಕಂಪನಿ ಮಾತುಕತೆ ನಡೆಸಿತು. ಯಾರ ಜತೆಗೆ ಮಾತನಾಡಬೇಕು ಎಂದು ಹೇಳಿದ್ದರೋ ಅವರ ಜತೆಗಷ್ಟೇ ನಾವು ಮಾತುಕತೆ ನಡೆಸಿದೆವು’ ಎಂದು ಒಲಾಂಡ್‌ ಹೇಳಿದ್ದಾಗಿ ‘ಮಿಡಿಯಾಪಾರ್ಟ್‌’ ವರದಿ ಮಾಡಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ 126 ರಫೇಲ್‌ ಯುದ್ಧ ವಿಮಾನ ಖರೀದಿಯ ಪ್ರಸ್ತಾವ ಇತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ಈ ಒಪ್ಪಂದವನ್ನು ಬದಿಗಿರಿಸಿ 36 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಖರೀದಿಸಬೇಕಾದ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು ಮತ್ತು ಹೆಚ್ಚು ಹಣ ಪಾವತಿಸಿದ್ದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ವಿರೋಧ ಪಕ್ಷಗಳ ಇತರ ಮುಖಂಡರು ಸರ್ಕಾರದ ವಿರುದ್ಧ ನಿರಂತರ ಆರೋಪ‍ ಮಾಡುತ್ತಿದ್ದಾರೆ.

ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಎರೋನಾಟಿಕಲ್‌ ಲಿ. (ಎಚ್‌ಎಎಲ್‌) ಬದಲಿಗೆ ರಿಲಯನ್ಸ್‌ ಡಿಫೆನ್ಸ್ ಕಂಪನಿಯನ್ನು ದೇಶೀ ಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಿದ್ದು ಕೂಡ ಟೀಕೆಯ ಮುಖ್ಯ ವಿಷಯವಾಗಿತ್ತು.

ಡಸಾಲ್ಟ್‌ ಕಂಪನಿಯೇ ರಿಲಯನ್ಸ್‌ ಕಂಪನಿಯನ್ನು ಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಿಕೊಂಡಿತು. ಇದರಲ್ಲಿ ಸರ್ಕಾರದ ಪಾಲು ಇರಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಒಲಾಂಡ್‌ ಅವರ ಹೇಳಿಕೆ ಸರ್ಕಾರದ ಪ್ರತಿಪಾದನೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

ಎಚ್‌ಎಎಲ್‌ನ ಮಾಜಿ ಅಧ್ಯಕ್ಷ ಟಿ. ಸುವರ್ಣ ರಾಜು ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಕೂಡ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಡಸಾಲ್ಟ್‌ ಜತೆಗೆ ಎಚ್‌ಎಎಲ್‌ ಕೆಲಸ ಹಂಚಿಕೆಯ ಒಪ್ಪಂದ ಮಾಡಿಕೊಂಡಿತ್ತು. ಮೂಲ ಒಪ್ಪಂದವನ್ನೇ ಎನ್‌ಡಿಎ ಸರ್ಕಾರ ಉಳಿಸಿಕೊಂಡಿದ್ದರೆ ಎಚ್‌ಎಎಲ್‌ನಲ್ಲಿಯೇ ರಫೇಲ್‌ ಯುದ್ಧ ವಿಮಾನಗಳನ್ನು ತಯಾರಿಸಬಹುದಿತ್ತು ಎಂದು ರಾಜು ಹೇಳಿದ್ದರು.

ರಫೇಲ್‌ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿದ್ದ ಹೇಳಿಕೆಗೆ ಇದು ವ್ಯತಿರಿಕ್ತವಾಗಿತ್ತು. ರಾಜು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ರಕ್ಷಣಾ ಸಚಿವಾಲಯ, ಎಚ್‌ಎಎಲ್‌ ಮತ್ತು ಡಸಾಲ್ಟ್‌ ನಡುವಣ ಭಿನ್ನಾಭಿಪ್ರಾಯಗಳೇ ಒಪ್ಪಂದ ಮುರಿದು ಬೀಳಲು ಕಾರಣ ಎಂದು ಹೇಳಿತ್ತು.

***

ಮೋದಿ ಸರ್ಕಾರ ಹೆಣೆದಿರುವ ಸುಳ್ಳಿನ ಬಲೆಯನ್ನು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಒಲಾಂಡ್ ಬಯಲಿಗೆಳೆದಿದ್ದಾರೆ. ರಿಲಯನ್ಸ್ ಗ್ರೂಪ್‌ ಜತೆಗೆ ರಫೇಲ್ ಒಪ್ಪಂದ ಕುದುರಿಸುವಂತೆ ಮೋದಿ ಸರ್ಕಾರವೇ ಒತ್ತಾಯ ಮಾಡಿದ್ದು ಸಾಬೀತಾಗಿದೆ

– ಕಾಂಗ್ರೆಸ್

ಈ ಬಾರಿ ಫ್ರಾನ್ಸ್‌ನ ಮಾಜಿ ಅಧ್ಯಕ್ಷರೇ ಸತ್ಯ ಹೇಳಿದ್ದಾರೆ. ಎನ್‌ಡಿಎ ಮಾಡಿಕೊಂಡ ರಫೇಲ್ ಒಪ್ಪಂದದಲ್ಲಿ ನಮಗೆ ಈವರೆಗೆ ಒಂದು ವಿಮಾನವೂ ದೊರೆತಿಲ್ಲ, ಭಾರತಕ್ಕೆ ಸಿಕ್ಕಿದ್ದು ಸುಳ್ಳು ಮಾತ್ರ. ಈಗ ಸರ್ಕಾರ ಇನ್ಯಾವ ಹೊಸ ಸುಳ್ಳು ಹೇಳುತ್ತದೋ

-ಪಿ.ಚಿದಂಬರಂ, ಕಾಂಗ್ರೆಸ್ ನಾಯಕ

ಮೋದಿ ಸರ್ಕಾರ ಜನರಿಗೆ ಸುಳ್ಳು ಹೇಳಿ, ದೇಶದ ದಾರಿತಪ್ಪಿಸಿದೆ. ರಕ್ಷಣಾ ಸಾಮಗ್ರಿ ತಯಾರಿಕೆಯಲ್ಲಿ ಅನುಭವವೇ ಇಲ್ಲದ ಕಾರ್ಪೊರೇಟ್ ಕಂಪನಿಯ ಪರವಾಗಿ ಸರ್ಕಾರ ಇಷ್ಟೆಲ್ಲಾ ಮಾಡುತ್ತಿರುವುದು ಏಕೆ? ಎಲ್ಲಾಸತ್ಯ ಈಗ ಹೊರಗೆ ಬರಲೇಬೇಕು

-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಇದು ಅತ್ಯಂತ ಆಘಾತಕಾರಿ ಸುದ್ದಿ. ಅನಿಲ್ ಅಂಬಾನಿಯನ್ನು ಪ್ರಮೋಟ್ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಪ್ರಧಾನಿ ಉತ್ತರಿಸಲಿ. ಅನಿಲ್ ಅಂಬಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಣ ಸಂಬಂಧ ಎಂಥದ್ದು?

-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

***

ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ರಹಸ್ಯವಾಗಿ ಚೌಕಾಶಿ ನಡೆಸಿ, ರಫೇಲ್ ಒಪ್ಪಂದವನ್ನು ಕುದುರಿಸಿದ್ದಾರೆ. ದಿವಾಳಿಯಾಗಿದ್ದ ಅನಿಲ್ ಅಂಬಾನಿಗೆ ಸಾವಿರಾರು ಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನು ಪ್ರಧಾನಿ ತಮ್ಮ ಕಯ್ಯಾರೆ ನೀಡಿದ್ದು ಹೇಗೆ ಎಂಬುದನ್ನು ತಿಳಿಸಿದ್ದಕ್ಕೆ ಫ್ರಾಂಸ್ವಾ ಒಲಾಂಡ್ ಅವರಿಗೆ ಧನ್ಯವಾದಗಳು. ಪ್ರಧಾನಿಯು ದೇಶಕ್ಕೆ ದ್ರೋಹ ಬಗೆದಿದ್ದಾರೆ. ದೇಶಕ್ಕಾಗಿ ರಕ್ತಚೆಲ್ಲಿದ ನಮ್ಮ ಸೈನಿಕರಿಗೆ ಅವಮಾನ ಮಾಡಿದ್ದಾರೆ

–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.