79ನೇ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ದೇಶದೆಲ್ಲೆಡೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ದೇಶವನ್ನು ಉದ್ದೇಶಿಸಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮಾತಾನಾಡಲಿದ್ದಾರೆ.
'ಕೇಂದ್ರ ಸರ್ಕಾರವು 'ಆಜಾದಿ ಕಾ ಅಮೃತ್ ಮಹೋತ್ಸವ'ದ ವೇಳೆ ಆರಂಭಿಸಿದ್ದ ಹರ್ ಘರ್ ತಿರಂಗಾ ಅಭಿಯಾನ ಈ ಬಾರಿಯೂ ಮುಂದುವರಿಯಲಿದೆ. ನಾಗರಿಕರು ತಮ್ಮ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ರಾಷ್ಟ್ರಧ್ವಜವನ್ನು ಗೌರವದಿಂದ ಹಾರಿಸುವ ಮೂಲಕ ದೇಶಪ್ರೇಮವನ್ನು ಮೆರೆಯಬಹುದು.
2002ರ ಭಾರತದ ಧ್ವಜ ಸಂಹಿತೆ ಪ್ರಕಾರ, ರಾಷ್ಟ್ರೀಯ ಧ್ವಜವನ್ನು ಸಾರ್ವಜನಿಕ -ಖಾಸಗಿ ಸಂಸ್ಥೆಗಳಲ್ಲಿ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಧ್ವಜ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು.
2022ರ ಜುಲೈ 20 ತಿದ್ದುಪಡಿಯು, ನೇಯ್ದ ಅಥವಾ ಯಂತ್ರಗಳಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಹಗಲು–ರಾತ್ರಿ ತೆರೆದ ಸ್ಥಳಗಳಲ್ಲಿ ಹಾಗೂ ಮನೆಗಳ ಮೇಲೆ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗಿದೆ. ಈ ಕ್ರಮವು ರಾಷ್ಟ್ರೀಯ ಲಾಂಛನಕ್ಕೆ ಗೌರವ ತೋರುವುದನ್ನು ಉತ್ತೇಜಿಸುತ್ತದೆ.
ಬಾವುಟವನ್ನು ಮಡಚುವ ವಿಧಾನಗಳು
ಭಾರತದ ರಾಷ್ಟ್ರೀಯ ತ್ರಿವರ್ಣ ಧ್ವಜದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕು. ಕೇಸರಿ, ಬಿಳಿ ಮತ್ತು ಹಸಿರು ಮಧ್ಯದಲ್ಲಿರುವ ನೀಲಿ ಬಣ್ಣದ ಅಶೋಕ ಚಕ್ರ ಹೊಂದಿರುವ 'ತ್ರಿವರ್ಣ ಧ್ವಜ' ಅಥವಾ ' ತಿರಂಗಾ' ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ.
ಪವಿತ್ರವಾದ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾದ ನಮ್ಮ ರಾಷ್ಟ್ರಧ್ವಜವನ್ನು ಸರಿಯಾಗಿ ಮಡಚುವ ವಿಧಾನ ಹೇಗೆ ಎಂದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನಿರ್ದೇಶನಗಳನ್ನು ನೀಡಿದೆ. ಬಾವುಟವನ್ನು ಮಡಚುವ ವಿಧಾನವು ನಾಲ್ಕು ಹಂತಗಳನ್ನು ಒಳಗೊಂಡಿದೆ:
ಧ್ವಜವನ್ನು ಮೇಜಿನ ಮೇಲೆ ಅಡ್ಡವಾಗಿ (ಅಶೋಕ ಚಕ್ರವು ಮೇಲ್ಭಾಗದಲ್ಲಿರುವಂತೆ) ಇರಿಸಿ ಅಥವಾ ಹಿಡಿದುಕೊಳ್ಳಿ.
ಕೇಸರಿ ಮತ್ತು ಹಸಿರು ಭಾಗವು ಬಿಳಿ ಭಾಗವನ್ನು ಸಂಧಿಸುವ ಪಟ್ಟಿಯಲ್ಲಿ, (ಅಶೋಕ ಚಕ್ರವು ಮೇಲ್ಭಾಗದಲ್ಲಿರುವಂತೆ) ಅಂಚುಗಳನ್ನು ಮಡಚಿ.
ಕೇಸರಿ, ಹಸಿರು ಪಟ್ಟಿಗಳು ಸ್ವಲ್ಪ ಕಾಣಿಸುವಂತೆ (ಅಶೋಕ ಚಕ್ರವು ಮೇಲ್ಭಾಗದಲ್ಲಿರುವಂತೆ) ಬಿಳಿ ಪಟ್ಟಿಯನ್ನು ಎರಡೂ ಪಾರ್ಶ್ವಗಳಿಂದ ಮಡಚಿ.
ಈಗ ಚೌಕಾಕಾರದಲ್ಲಿ ಮಡಚಲಾಗಿರುವ (ಅಶೋಕ ಚಕ್ರವು ಮೇಲ್ಭಾಗದಲ್ಲಿರುವಂತೆ) ಧ್ವಜವನ್ನು ಎರಡೂ ಕೈಗಳಿಂದ ಜೋಪಾನವಾಗಿ ತೆಗೆದುಕೊಂಡು, ಸುರಕ್ಷಿತ ಜಾಗದಲ್ಲಿ ಎತ್ತಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.