ADVERTISEMENT

ದಕ್ಷಿಣ ಆಫ್ರಿಕಾ ಪ್ರಜೆಗಳ ಹೃದಯ ತಟ್ಟಿದ ಮಹಾತ್ಮನ ಸ್ತಬ್ಧಚಿತ್ರ

ಪಿಟಿಐ
Published 27 ಜನವರಿ 2019, 4:58 IST
Last Updated 27 ಜನವರಿ 2019, 4:58 IST

ನವದೆಹಲಿ: ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ ‘ಮಹಾತ್ಮ’ರಾಗಿ ರೂಪಾಂತರಗೊಂಡ ಚಿತ್ರದ ಸ್ತಬ್ಧಚಿತ್ರ ಶನಿವಾರ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು.

125 ವರ್ಷಗಳ ಹಿಂದೆ ಯುವ ವಕೀಲರಾಗಿದ್ದ ಮಹಾತ್ಮ ಗಾಂಧಿಯವರನ್ನು ದಕ್ಷಿಣ ಆಫ್ರಿಕಾದ ಪೀಟರ್‌ಮಾರಿಟ್‌ಬರ್ಗ್‌ ರೈಲು ನಿಲ್ದಾಣದಲ್ಲಿ ಬಿಳಿಯರು ತಮಗೆ ಮೀಸಲಾಗಿದ್ದ ರೈಲು ಬೋಗಿಯಿಂದ ಜನಾಂಗೀಯ ನಿಂದನೆ ಮಾಡಿ, ಹೊರ ತಳ್ಳಿದ್ದರು.

ಆನಂತರ ಗಾಂಧೀಜಿ ಒಬ್ಬ ಹೋರಾಟಗಾರರಾಗಿ ‘ಮಹಾತ್ಮ’ರಾಗಿ ಎಲ್ಲ ಹೃದಯದಲ್ಲಿ ನೆಲೆಸುವಂತೆ ಆದ ಚಿತ್ರಣವನ್ನು ರೈಲ್ವೆ ಇಲಾಖೆ ಸ್ತಬ್ಧಚಿತ್ರದ ಮೂಲಕ ಸಾದರಪಡಿಸಿತು.

ADVERTISEMENT

ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಗಣ್ಯರು, ಪತ್ರಕರ್ತರು ಈ ಸ್ತಬ್ಧಚಿತ್ರಕ್ಕೆ ಮಾರುಹೋದರು.

ಕ್ವಾಝುಲು-ನಟಾಲ್ ಪ್ರಾಂತ್ಯದಿಂದ ಬಂದಿದ್ದ ಭಾರತ ಸಂಜಾತೆಯಾದ ಪತ್ರಕರ್ತೆ ಯಾಶಿಕಾ ಸಿಂಗ್ ‘ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ಆದರೆ, ಭಾರತದೊಂದಿಗೆ ನನಗೆ ಗಾಢವಾದ ಸಂಬಂಧ ಹೊಂದಿದ್ದೇವೆ. ಗಾಂಧಿ ಮತ್ತು ಮಂಡೇಲಾ ಈ ಎರಡೂ ರಾಷ್ಟ್ರಗಳ ನಂಟನ್ನುಇನ್ನಷ್ಟು ಗಟ್ಟಿಯಾಗಿ ಬೆಸೆದಿದ್ದಾರೆ. ಈ ಸ್ತಬ್ಧಚಿತ್ರ ನನ್ನ ಹೃದಯವನ್ನು ತಟ್ಟಿದೆ’ ಎಂದರು.

ಅಧ್ಯಕ್ಷರೊಂದಿಗೆ ಜೋಹಾನ್ಸ್‌ಬರ್ಗ್‌ನಿಂದ ಬಂದಿದ್ದ ಫಕಿರ್ ಹಸನ್‌, ಡರ್ಬಾನ್‌ ಮೂಲದ ಸಲ್ಮಾ ಪಟೇಲ್‌ ಅವರು ಸಹ ಯಾಶಿಕಾ ಅವರ ಭಾವನೆಗೆ ಧ್ವನಿಗೂಡಿಸಿದರು.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೊಸಾ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.