ADVERTISEMENT

ಹೊಸ ವರ್ಷದಂದೇ ರೈಲು ಪ್ರಯಾಣಿಕರಿಗೆ ಶಾಕ್: ಪ್ರಯಾಣ ದರ ಹೆಚ್ಚಿಸಿದ ರೈಲ್ವೆ ಇಲಾಖೆ

ಈಗಾಗಲೇ ಕಾಯ್ದಿರಿಸಿರುವ ಟಿಕೆಟ್‌ಗಳಿಗೆ ದರ ಹೆಚ್ಚಳ ಅನ್ವಯವಾಗಲ್ಲ * ಕಾಯ್ದಿರಿಸುವಿಕೆ ಶುಲ್ಕದಲ್ಲಿ ವ್ಯತ್ಯಾಸವಿಲ್ಲ

ಏಜೆನ್ಸೀಸ್
Published 31 ಡಿಸೆಂಬರ್ 2019, 14:49 IST
Last Updated 31 ಡಿಸೆಂಬರ್ 2019, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ರೈಲು ಪ್ರಯಾಣದ ದರ ಹೆಚ್ಚಳ ಮಾಡಿರೈಲ್ವೆ ಇಲಾಖೆ ಆದೇಶ ಹೊರಡಿಸಿದ್ದು, ಪರಿಷ್ಕೃತ ದರ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಉಪನಗರ ರೈಲು ಪ್ರಯಾಣ ದರದಲ್ಲಿ ಬದಲಾವಣೆ ಇಲ್ಲ. ಆರ್ಡಿನರಿ ನಾನ್‌ ಎಸಿ, ಎಸಿ, ಶತಾಬ್ದಿ, ರಾಜಧಾನಿ, ತುರಂತ್ ರೈಲುಗಳಿಗೆ ದರ ಹೆಚ್ಚಳ ಅನ್ವಯವಾಗಲಿದೆ. ಟಿಕೆಟ್ ಕಾಯ್ದಿರಿಸುವಿಕೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಇಲಾಖೆ ತಿಳಿಸಿದೆ.

ಈಗಾಗಲೇ ಕಾಯ್ದಿರಿಸಿರುವ ಟಿಕೆಟ್‌ಗಳಿಗೆ ದರ ಹೆಚ್ಚಳ ಅನ್ವಯವಾಗುವುದಿಲ್ಲ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಆರ್ಡಿನರಿ ನಾನ್‌ ಎಸಿ ರೈಲು ಪ್ರಯಾಣದ ದರ ಕಿ.ಮೀ ಗೆ 1 ಪೈಸೆ, ಮೈಲ್/ಎಕ್ಸ್‌ಪ್ರೆಸ್‌ ನಾನ್‌ ಎಸಿರೈಲು ಪ್ರಯಾಣದ ದರ ಕಿ.ಮೀ ಗೆ 2 ಪೈಸೆ ಮತ್ತು ಎಸಿ ರೈಲುಗಳ ಪ್ರಯಾಣ ದರಕಿ.ಮೀ ಗೆ4 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

ದೆಹಲಿ–ಕೋಲ್ಕತ್ತ ನಡುವಣ ರಾಜಧಾನಿ ರೈಲಿನ ದರ 4 ಪೈಸೆ ಹೆಚ್ಚಾಗಿದ್ದು, ಒಟ್ಟು ದರ ₹ 58 ಹೆಚ್ಚಳ ಆಗಲಿದೆ (ಈ ಮಾರ್ಗ 1,447 ಕಿ.ಮೀ ಇದೆ).

ಹೆಚ್ಚುತ್ತಿರುವ ವೆಚ್ಚ ಮತ್ತು ಕಡಿಮೆಯಾಗುತ್ತಿರುವ ಆದಾಯದಿಂದ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು,ಪ್ರಯಾಣ ಮತ್ತು ಸರಕು ಸಾಗಾಣಿಕೆ ದರಗಳನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಇತ್ತೀಚೆಗಷ್ಟೇ ಇಲಾಖೆ ಮೂಲಗಳು ತಿಳಿಸಿದ್ದವು.ಪ್ರಯಾಣ ಮತ್ತು ಸರಕು ಸಾಗಾಣಿಕೆ ದರಗಳನ್ನು ಶೀಘ್ರ ಪ್ರಕಟಿಸುತ್ತೇವೆ ಎಂದುಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್‌ ತಿಳಿಸಿದ್ದರು.

ಐದು ವರ್ಷಗಳ ಬಳಿಕ ದರ ಹೆಚ್ಚಳ:2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್‌ 25ರಂದು ದರಗಳನ್ನು ಹೆಚ್ಚಿಸಲಾಗಿತ್ತು. ಆಗ ಪ್ರಯಾಣ ದರಗಳನ್ನು ಶೇಕಡ 14.2 ಮತ್ತು ಸರಕು ಸಾಗಾಣಿಕೆ ದರಗಳನ್ನು ಶೇಕಡ 6.5ರಷ್ಟು ಹೆಚ್ಚಿಸಲಾಗಿತ್ತು. ಆದರೆ, ಅದು ಎನ್‌ಡಿಎ ಸರ್ಕಾರದ್ದೇ ನಿರ್ಧಾರವಾಗಿರಲಿಲ್ಲ. ಹಿಂದಿನ ಯುಪಿಎ ಸರ್ಕಾರದಲ್ಲಿ ಅನುಮೋದನೆ ದೊರೆತ ಪ್ರಸ್ತಾವವನ್ನು ಹೊಸ ಸರ್ಕಾರ ಜಾರಿ ಮಾಡಿತ್ತು. ಇದೀಗ ಸುಮಾರು ಐದು ವರ್ಷಗಳ ಬಳಿಕ ದರ ಹೆಚ್ಚಳ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.