ADVERTISEMENT

ಸತ್ತವರು, ವಲಸೆ ಹೋದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆಯೇ?: CEC ಜ್ಞಾನೇಶ್

ಪಿಟಿಐ
Published 24 ಜುಲೈ 2025, 9:39 IST
Last Updated 24 ಜುಲೈ 2025, 9:39 IST
<div class="paragraphs"><p>ಜ್ಞಾನೇಶ್ ಕುಮಾರ್</p></div>

ಜ್ಞಾನೇಶ್ ಕುಮಾರ್

   

(ಪಿಟಿಐ ಚಿತ್ರ)

ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಲು ಉದ್ದೇಶಿಸಿರುವ ಮತದಾರರ ವಿಶೇಷ ತ್ವರಿತ ಪರಿಷ್ಕರಣೆ ಕಾರ್ಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ಪ್ರಭಾವಕ್ಕೊಳಗಾಗಿ ಸತ್ತವರು, ಶಾಶ್ವತವಾಗಿ ವಲಸೆ ಹೋದವರು ಅಥವಾ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರರಾಗಿರುವವರನ್ನು ಪಟ್ಟಿಗೆ ಚುನಾವಣಾ ಸಿಬ್ಬಂದಿ ಸೇರಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಚುನಾವಣಾ ಆಯೋಗದ ಕ್ರಮವು ಕೋಟ್ಯಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಷಡ್ಯಂತ್ರ ರೂಪಿಸಿದೆ ಎಂದು ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿರೋಧ ಪಕ್ಷಗಳು ಚುನಾವಣಾ ಆಯೋಗವನ್ನೇ ನೇರವಾಗಿ ಗುರಿಯಾಗಿಸಿ ಮಾಡುತ್ತಿರುವ ಆರೋಪಗಳಿಗೆ ಜ್ಞಾನೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.

‘ನ್ಯಾಯಸಮ್ಮತ ಚುನಾವಣೆ ಮತ್ತು ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯಕ್ಕಾಗಿ ಒಂದು ಪಾರದರ್ಶಕ ವ್ಯವಸ್ಥೆಯಲ್ಲಿ ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲವೇ? ಬಿಹಾರದಿಂದ ಮೊದಲುಗೊಂಡು ಇಡೀ ದೇಶದಲ್ಲಿ ಅನರ್ಹರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡುವುದು ಸಂವಿಧಾನ ವಿರೋಧಿ ಕ್ರಮವಾಗಿದೆ’ ಎಂದಿದ್ದಾರೆ.

‘ಈ ಪ್ರಶ್ನೆ ಕುರಿತು ರಾಜಕೀಯ ಸಿದ್ಧಾಂತಗಳನ್ನು ಮೀರಿ ಇಂದಲ್ಲಾ ನಾಳೆ ಇಡೀ ಭಾರತದ ನಾಗರಿಕರಾದ ನಾವೆಲ್ಲರೂ ಆಲೋಚಿಸಬೇಕಿದೆ’ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

ಬಿಹಾರದಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡುತ್ತಿದ್ದಾರೆ. ಈವರೆಗೂ ವಿಳಾಸದಲ್ಲಿಲ್ಲದ 52 ಲಕ್ಷ ಮತದಾರರು ಮತ್ತು 18 ಲಕ್ಷ ಮೃತರ ಹೆಸರು ಪಟ್ಟಿಯಲ್ಲಿರುವುದನ್ನು ಪತ್ತೆ ಮಾಡಿದ್ದಾರೆ.

ಚುನಾವಣಾ ಆಯೋಗ ನೇಮಿಸಿರುವ ಬೂತ್‌ ಮಟ್ಟದ ಅಧಿಕಾರಿಗಳು ಹಾಗೂ ಪಕ್ಷಗಳು ನೇಮಿಸಿರುವ ಬೂತ್‌ ಮಟ್ಟದ ಏಜೆಂಟರಿಂದ ಯಾವುದೇ ಹೆಸರು ಬಿಟ್ಟುಹೋಗಿದ್ದರೆ ಅಥವಾ ಕೈಬಿಟ್ಟಿದ್ದರೆ ಮರಳಿ ಮತದಾರರ ಪಟ್ಟಿಗೆ ಸೇರಿಸಲು ಮತದಾರರು ಅಥವಾ ಯಾವುದೇ ಗುರುತಿಸಲಾದ ರಾಜಕೀಯ ಪಕ್ಷಗಳಿಗೆ ಆ. 1ರಿಂದ ಸೆ. 1ರವರೆಗೆ ಒಂದು ತಿಂಗಳ ಕಾಲಾವಕಾಶ ಇದೆ ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.