
ಚಂಡೀಗಢ: ಪಾಕಿಸ್ತಾನಕ್ಕೆ ತೆರಳಿದ್ದ ಸಿಖ್ ಯಾತ್ರಿಕರೊಬ್ಬರು ಅಲ್ಲಿಂದ ಹಿಂದಿರುಗದೇ ಇರುವ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸರು ಶನಿವಾರ ತಿಳಿಸಿದರು.
ಸಿಖ್ ಧರ್ಮದ ಸ್ಥಾಪಕರಾದ ಗುರು ನಾನಕ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ, ಅವರ ಜನ್ಮಸ್ಥಳವಾದ ಪಾಕಿಸ್ತಾನದ ಗುರುದ್ವಾರದ ನಂಖಾನಾ ಸಾಹಿಬ್‌ನಲ್ಲಿ ಹಾಗೂ ಇತರ ಸಿಖ್ ಧಾರ್ಮಿಕ ಸ್ಥಳಗಳಲ್ಲಿ ‘ಜಾಥಾ’ ಆಯೋಜಿಸಲಾಗಿತ್ತು. ಇದರಲ್ಲಿ ಭಾಗಿಯಾಗಲು 1,900 ಭಾರತೀಯ ಸಿಖ್ಖರು ಅಟ್ಟಾರಿ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ನ.4ರಂದು ತೆರಳಿದ್ದರು.
ಎರಡು ದಿನಗಳ ನಂತರ ಎಲ್ಲರೂ ಭಾರತಕ್ಕೆ ಹಿಂದಿರುಗಿದರು. ಆದರೆ 48 ವರ್ಷದ ಮಹಿಳೆ ಸರಬ್ಜೀತ್ ಕೌರ್ ಅವರು ಈವರೆಗೂ ಹಿಂದಿರುಗಿಲ್ಲ. ಇವರು ಕಪೂರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದ ನಿವಾಸಿಯಾಗಿದ್ದಾರೆ.
ಸರಬ್ಜೀತ್ ಅವರು ಇಸ್ಲಾಂಗೆ ಮತಾಂತರಗೊಂಡಿದ್ದು, ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸರಬ್ಜೀತ್ ಅವರ ಪತಿ ಹಲವು ವರ್ಷಗಳಿಂದ ವಿದೇಶದಲ್ಲಿ ವಾಸಿಸುತ್ತಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
‘ಸರಬ್ಜೀತ್ ವಿರುದ್ಧ ಮೂರು ವಂಚನೆ ಪ್ರಕರಣಗಳಿವೆ. ಇವರು ಮತಾಂತರಗೊಂಡಿರುವ ಬಗ್ಗೆ ನಮಗೆ ಮಾಹಿತಿ ದೊರೆತಿಲ್ಲ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.