ADVERTISEMENT

Covid-19 India Update: ದೆಹಲಿಯ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಡೆಂಗಿ, ಕೋವಿಡ್

ಏಜೆನ್ಸೀಸ್
Published 24 ಸೆಪ್ಟೆಂಬರ್ 2020, 16:37 IST
Last Updated 24 ಸೆಪ್ಟೆಂಬರ್ 2020, 16:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಹಾದಿಯಲ್ಲಿಯೇ ಇದೆ. ಕೋವಿಡ್‌ ದೃಢಪಟ್ಟಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಸ್ಪತ್ರೆಗೆ ದಾಖಲಾಗಿದ್ದು, ದೆಹಲಿಯಲ್ಲೂ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 3,800 ದಾಟಿದೆ.

ಡೆಂಗಿಯಿಂದ ಬಳಲುತ್ತಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಯಿಂದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ವೈರಸ್‌ ಸೋಂಕಿಗೂ ಒಳಗಾಗಿರುವ ಅವರಿಗೆ ಜ್ವರ ಇದ್ದು, ಉಸಿರಾಟದ ಸಮಸ್ಯೆ ಸಹ ಕಾಣಿಸಿಕೊಂಡಿದೆ. ರಕ್ತದಲ್ಲಿ ಪ್ಲೇಟ್‌ಲೆಟ್‌ ಪ್ರಮಾಣ ಕೂಡ ಇಳಿಮುಖವಾಗಿದೆ.

ಸೆಪ್ಟಂಬರ್ 14ರಂದು ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅಂದಿನಿಂದ ಹೋಂ ಕ್ವಾರಂಟೈನ್‌ನಲ್ಲಿದ್ದರು. ಬುಧವಾರ ಅವರು ಲೋಕ ನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು.

ADVERTISEMENT

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌ ದೃಢಪಟ್ಟ 19,164 ಪ್ರಕರಣಗಳು ದಾಖಲಾಗಿದ್ದು, 17,184 ಮಂದಿ ಗುಣಮುಖರಾಗಿದ್ದಾರೆ. ಇದೇ ಅವಧಿಯಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 459 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 12,82,963 ತಲುಪಿದೆ. ಈ ಪೈಕಿ 2,74,993 ಸಕ್ರಿಯ ಪ್ರಕರಣಗಳಿದ್ದು, 9,73,214 ಮಂದಿ ಗುಣಮುಖರಾಗಿದ್ದಾರೆ ಹಾಗೂ 34,345 ಮಂದಿ ಸಾವಿಗೀಡಾಗಿದ್ದಾರೆ.

ದೆಹಲಿಯಲ್ಲಿ 3,834 ಹೊಸ ಪ್ರಕರಣಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 3,509 ಮಂದಿ ಗುಣಮುಖರಾಗಿದ್ದು, 36 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು 2,24,375 ಮಂದಿ ಗುಣಮುಖರಾಗಿದ್ದು, 31,125 ಸಕ್ರಿಯ ಪ್ರಕರಣಗಳಿವೆ ಹಾಗೂ 5,123 ಮಂದಿ ಸಾವಿಗೀಡಾಗಿದ್ದಾರೆ. ‌

ಆಂಧ್ರ ಪ್ರದೇಶದಲ್ಲಿ 7,855 ಹೊಸ ಪ್ರಕರಣಗಳು, ತಮಿಳುನಾಡಿನಲ್ಲಿ 5,692 ಪ್ರಕರಣಗಳು ಹಾಗೂ ಗುಜರಾತ್‌ನಲ್ಲಿ 1,408 ಪ್ರಕರಣಗಳು ದಾಖಲಾಗಿವೆ.

ಗುರುವಾರ ಬೆಳಗ್ಗಿನ ವರೆಗೂ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86,508 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 57 ಲಕ್ಷ ದಾಟಿದೆ.

ಇದೇ ವೇಳೆ ಕೋವಿಡ್‌ನಿಂದಾಗಿ ಕಳೆದ 24 ಗಂಟೆಗಳಲ್ಲಿ 1,129 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಈ ವರೆಗೆ 91,149 ಮಂದಿ ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದಾರೆ.

ಸದ್ಯ ದೇಶದ ಒಟ್ಟು ಕೋವಿಡ್‌ ಪ್ರಕರಣಗಳು 5,732,519 ಆಗಿದ್ದು, ಇದರಲ್ಲಿ 9,66,382 ಸಕ್ರಿಯ ಪ್ರಕರಣಗಳಿವೆ. 46,74,988 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ದಿನವೊಂದಕ್ಕೆ ದೇಶದಲ್ಲಿ ಪತ್ತೆಯಾಗುತ್ತಿರುವ ಸಕ್ರಿಯ ಪ್ರಕರಣಗಳಿಗಿಂತಲೂ, ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿದೆ. ಕಳೆದ ಐದು ದಿನಗಳಿಂದಲೂ ಈ ಸಂಖ್ಯೆ ವೃದ್ಧಿಯಾಗುತ್ತಾ ಸಾಗಿದೆ.

ಭಾರತದಲ್ಲಿ ಈ ವರೆಗೆ ಪರೀಕ್ಷೆಗಾಗಿ 6,74,36,031 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಬುಧವಾರ ಒಂದೇ ದಿನ 11,56,569 ಮಾದರಿಗಳನ್ನು ಸಂಗ್ರಹಿಸಿರುವುದಾಗಿ ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.