ADVERTISEMENT

ವಿಶ್ವದಲ್ಲೇ ಅತಿ ವೇಗವಾಗಿ ಕೋವಿಡ್‌ ವ್ಯಾಪಿಸುತ್ತಿರುವ ರಾಷ್ಟ್ರ ಈಗ ಭಾರತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 1:58 IST
Last Updated 29 ಆಗಸ್ಟ್ 2020, 1:58 IST
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ    

ದೆಹಲಿ: ಭಾರತದಲ್ಲಿ ಪ್ರತಿನಿತ್ಯ 75,000ಕ್ಕೂ ಹೆಚ್ಚು ಹೊಸ ಕೋವಿಡ್‌–19 ಪ್ರಕರಣಗಳು ವರದಿಯಾಗುತ್ತಿದೆ. ಈ ಮೂಲಕ ಭಾರತಲ್ಲಿ ಈಗ ವಿಶ್ವದ ಯಾವುದೇ ದೇಶಕ್ಕಿಂತಲೂ ಅತಿ ವೇಗವಾಗಿ ಕೋವಿಡ್‌ ವ್ಯಾಪಿಸುತ್ತಿದೆ.

ಇಲ್ಲಿನ ನಗರಗಳ ಕಿಕ್ಕಿರಿದ ಜನಸಂದಣಿ, ಲಾಕ್‌ಡೌನ್ ತೆರವು ಮತ್ತು ಸಂಪರ್ಕ ಪತ್ತೆಹಚ್ಚುವಿಕೆಯಲ್ಲಿನ ವೈಫಲ್ಯಗಳು 130 ಶತಕೋಟಿ ಜನಸಂಖ್ಯೆ ಇರುವ ದೇಶದ ಮೂಲೆ ಮೂಲೆಗೆ ಕೋವಿಡ್ -19 ಅನ್ನು ಹರಡಿದೆ. ಈ ವಾರ, ಸಮುದ್ರದ ನಡುವಿನ ದೂರದ ದ್ವೀಪವೊಂದರ ಸಣ್ಣ ಬುಡಕಟ್ಟು ಜನಾಂಗದ ಆರನೇ ಒಂದು ಭಾಗವು ವೈರಸ್‌ನಿಂದ ಭಾದೆಗೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಕುಸಿತದಿಂದ ಕಂಗಾಲಾಗಿರುವ ಹೆಚ್ಚಿನ ರಾಜ್ಯಗಳು ಹಣಕಾಸು ವ್ಯವಸ್ಥೆಯನ್ನು ಉತ್ತೇಜಿಸಿಸಲು ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವುದರಿಂದ ವೈರಸ್ ವೃದ್ಧಿ ದರವು ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

'ಮುಂದಿನ ದಿನಗಳಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಎಲ್ಲಾ ಮುನ್ಸೂಚನೆಗಳು ಭಾರತದಲ್ಲಿ ಕಾಣಿಸುತ್ತಿದೆ,’ ಎಂದು ದಕ್ಷಿಣ ಭಾರತದ ಮೆಲಕಾ ಮಣಿಪಾಲ್ ವೈದ್ಯಕೀಯ ಕಾಲೇಜಿನ ಆರೋಗ್ಯ ಸಂಶೋಧಕ ಡಾ.ಅನಂತ್ ಭನ್ ಹೇಳಿದ್ದಾರೆ. ‘ಕೋವಿಡ್‌–19ನಲ್ಲಿ ನಾವು ಜಾಗತಿಕವಾಗಿ ನಂ.1 ಸ್ಥಾನಕ್ಕೆ ಹೋಗಲಿದ್ದೇವೆ,’ ಎಂಬುದು ತೀರ ಬೇಸರದ ಸಂಗತಿ ಎಂದೂ ಅವರು ಹೇಳಿದ್ದಾರೆ.

‘ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ಲಾಕ್ ಡೌನ್ ಸಮಯದಲ್ಲಿ ಕೋವಿಡ್‌ ಪ್ರಕರಣಗಳು ಭಾರತದ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಅಂತರರಾಜ್ಯ ಪ್ರಯಾಣದ ಮೇಲಿನ ನಿರ್ಬಂಧಗಳು ಸಡಿಲಗೊಳ್ಳುತ್ತಿದ್ದಂತೆ ಲಕ್ಷಾಂತರ ಜನರು ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗಲು ಆರಂಭಿಸಿದರು. ಈ ಮೂಲಕ ಹಳ್ಳಿಗಳಿಗೂ ವೈರಸ್‌ ತಲುಪಿಸಿದರು,’ ಎಂದು ಅವರು ಭನ್‌ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ -19 ನಿಂದಾಗಿ ದೇಶದಲ್ಲಿ 61,529 ಭಾರತೀಯರು ಸಾವಿಗೀಡಾಗಿದ್ದಾರೆ. ದೇಶದಲ್ಲಿ 33,87,500 ಸೋಂಕು ಪ್ರಕರಣಗಳು ಈ ವರೆಗೆ ವರದಿಯಾಗಿವೆ. ಕೋವಿಡ್‌ ಪ್ರಕರಣಗಳಲ್ಲಿ ಅಮೆರಿಕ, ಬ್ರೆಜಿಲ್‌ ನಂತರ ಮೂರನೇ ಸ್ಥಾನದಲ್ಲಿರುವ ಭಾರತವು, ಶೀಘ್ರದಲ್ಲೇ ಸಾವಿನ ಸಂಖ್ಯೆಯಲ್ಲೂ ಮೂರನೇ ಸ್ಥಾನಕ್ಕೆ ಏರುವ ಎಲ್ಲ ಸಾಧ್ಯತೆಗಳಿವೆ. ಅಲ್ಲದೆ, ಕೋವಿಡ್‌ ಪ್ರಕರಣಗಳ ಪಟ್ಟಿಯಲ್ಲಿ ಬ್ರೆಜಿಲ್‌ ಅನ್ನು ಹಿಂದಿಕ್ಕುವ ಸಾಧ್ಯತೆಗಳೂ ಕಾಣಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.