ADVERTISEMENT

‘ರೆಮ್‌ಡೆಸಿವಿರ್‌’ ಪೂರೈಕೆ ಮಾಡಲು ಒಪ್ಪಿಗೆ

ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ: ಕೆಲವು ನಿರ್ಬಂಧ ವಿಧಿಸಿ ಬಳಕೆಗೆ ಅನುಮೋದನೆ

ಪಿಟಿಐ
Published 3 ಜೂನ್ 2020, 2:24 IST
Last Updated 3 ಜೂನ್ 2020, 2:24 IST
   

ನವದೆಹಲಿ: ಆಸ್ಪತ್ರೆಗೆ ದಾಖಲಾದ ಕೋವಿಡ್‌–19 ರೋಗಿಗಳಿಗೆ ‘ರೆಮ್‌ಡೆಸಿವಿರ್‌’ ಔಷಧ ಬಳಸುವ ನಿಟ್ಟಿನಲ್ಲಿ ಅಧಿಕೃತವಾಗಿ ಪೂರೈಕೆ ಮಾಡಲು ಅಮೆರಿಕದ ಫಾರ್ಮಾ ಕಂಪನಿ ಗಿಲಿಯಾಡ್‌ ಸೈನ್ಸಸ್‌ಗೆ ಒಪ್ಪಿಗೆ ನೀಡಲಾಗಿದೆ.

ವೈರಾಣು ನಿರೋಧಕ ‘ರೆಮ್‌ಡೆಸಿವಿರ್‌’ ಔಷಧವನ್ನು ‘ತುರ್ತು ಪರಿಸ್ಥಿತಿ’ ಸಂದರ್ಭದಲ್ಲಿ ಮಾತ್ರ ಬಳಸಬಹುದು ಎಂದು ಸೂಚಿಸಿ ನಿರ್ಬಂಧಗಳನ್ನು ವಿಧಿಸಲಾಗಿದೆ.

ಕೋವಿಡ್‌–19 ಶಂಕಿತ ಅಥವಾ ದೃಢಪಟ್ಟ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ ವಯಸ್ಕರು ಮತ್ತು ಮಕ್ಕಳಿಗೆ ಗರಿಷ್ಠ ಐದು ದಿನಗಳವರೆಗೆ ಮಾತ್ರ ಈ ಔಷಧವನ್ನು ಬಳಸಲು ಅವಕಾಶ ನೀಡಲಾಗಿದೆ.

ADVERTISEMENT

ಇಂಜೆಕ್ಷನ್‌ ರೂಪದಲ್ಲಿ ಈ ಔಷಧವನ್ನು ರೋಗಿಗಳಿಗೆ ನೀಡಲಾಗುತ್ತಿದೆ. ತಜ್ಞ ವೈದ್ಯರ ಶಿಫಾರಸ್ಸಿನ ಮೇಲೆ ಆಸ್ಪತ್ರೆಗಳಲ್ಲಿ ಬಳಕೆ ಮಾಡಲು ಮಾತ್ರ ಈ ಔಷಧವನ್ನು ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ.

ಡ್ರಗ್‌ ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮ–2019ರ ಅನ್ವಯ ‘ರೆಮ್‌ಡೆಸಿವಿರ್‌‘ ಔಷಧಕ್ಕೆ ಅನುಮೋದನೆ ನೀಡಲಾಗಿದೆ. ಗಿಲಿಯಾಡ್‌ ಸೈನ್ಸಸ್‌ ಕಂಪನಿ ಮೇ 29ರಂದು ಅರ್ಜಿ ಸಲ್ಲಿಸಿತ್ತು. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿ ಜತೆ ಸಮಾಲೋಚನೆ ನಡೆಸಿದ ಬಳಿಕ ಅನುಮೋದನೆ ನೀಡಲಾಗಿದೆ.

ಗಿಲಿಯಾಡ್‌ ಸೈನ್ಸಸ್ ಈ ಔಷಧದ ಪೆಟೆಂಟ್‌ ಪಡೆದಿದ್ದು, ಕ್ಲಿನಿಕಲ್‌ ಪೂರ್ವ ಮತ್ತು ಕ್ಲಿನಿಕಲ್‌ ಅಧ್ಯಯನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದೆ. ಈ ಔಷಧವನ್ನು ಮುಂಬೈ ಮೂಲದ ಕ್ಲಿನೆರಾ ಗ್ಲೋಬಲ್‌ ಸರ್ವಿಸಸ್‌ ಕಂಪನಿ ಆಮದು ಮಾಡಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ಈ ಔಷಧಿಯನ್ನು ತುರ್ತು ಸಂದರ್ಭದಲ್ಲಿ ಬಳಸಲುಅಮೆರಿಕದ ‘ಫುಡ್‌ ಆ್ಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌’ (ಎಫ್‌ಡಿಎ) ಸಹ ಅನುಮತಿ ನೀಡಿದೆ.

ಇದೇ ವೇಳೆ, ಭಾರತದಲ್ಲಿ ‘ರೆಮ್‌ಡೆಸಿವಿರ್‌’ ತಯಾರಿಸಲು ಮತ್ತು ಮಾರಾಟ ಮಾಡಲು ಅನುಮತಿ ಕೋರಿ ದೇಶಿಯ ಫಾರ್ಮಾಸ್ಯೂಟಿಕಲ್‌ ಕಂಪನಿಗಳಾದ ಸಿಪ್ಲಾ ಮತ್ತು ಹೆಟೆರೊ ಲ್ಯಾಬ್ಸ್‌ ಸಲ್ಲಿಸಿರುವ ಅರ್ಜಿಗಳು ಇನ್ನೂ ಪರಿಶೀಲನೆಯ ಹಂತದಲ್ಲಿವೆ.

‘ರೆಮ್‌ಡೆಸಿವಿರ್‌’ ಉತ್ಪಾದನೆ ಮತ್ತು ವಿತರಣೆಗೆ ಸಿಪ್ಲಾ, ಜುಬಿಲಿಯಂಟ್‌ ಲೈಫ್‌ ಸೈನ್ಸಸ್‌, ಹೆಟೆರೊ ಕಂಪನಿಗಳ ಜತೆ ಗಿಲಿಯಾಡ್‌ ಸೈನ್ಸ್‌ಸ್‌ ಕಂಪನಿ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.