ADVERTISEMENT

ಚಿರತೆಗಳ ಸಂಖ್ಯೆ ಹೆಚ್ಚಳ: ಕೇಂದ್ರ ಪರಿಸರ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
–
   

ನವದೆಹಲಿ: ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ. 2018ರಲ್ಲಿ 12,852 ಇದ್ದ ಈ ವನ್ಯಮೃಗಗಳ ಸಂಖ್ಯೆ 2022ರಲ್ಲಿ 13,874ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಸಹ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ. 2018ರಲ್ಲಿ ಕರ್ನಾಟಕದಲ್ಲಿ 1,783 ಚಿರತೆಗಳು ಇದ್ದವು. 2022ರಲ್ಲಿ ಇವುಗಳ ಸಂಖ್ಯೆ 1,879 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಗುರುವಾರ ಹೇಳಿದೆ.

ದೇಶದಲ್ಲಿ ಒಟ್ಟಾರೆ ಚಿರತೆ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದರೂ, ಉತ್ತರ ಭಾರತದ ಸಿಂಧು–ಗಂಗಾ ಬಯಲು ಪ್ರದೇಶ ಹಾಗೂ ಶಿವಾಲಿಕ್ ಪರ್ವತ ಪ್ರದೇಶದಲ್ಲಿ ಇವುಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿ ಚಿರತೆಗಳ ಸ್ಥಿತಿಗತಿ’ ಎಂಬ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ 3,907 ಚಿರತೆಗಳಿವೆ. 2018ರಲ್ಲಿ ಇವುಗಳ ಸಂಖ್ಯೆ 3,421 ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ. ಮಹಾರಾಷ್ಟ್ರದಲ್ಲಿ 2018ರಲ್ಲಿ 1,690ರಷ್ಟಿದ್ದ ಚಿರತೆಗಳ ಸಂಖ್ಯೆ 2022ರ ವೇಳೆಗೆ 1,985ಕ್ಕೆ ಏರಿಕೆಯಾಗಿತ್ತು.  ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಇವುಗಳ ಸಂಖ್ಯೆ 868ರಿಂದ 1,070ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ದೇಶದ ಮಧ್ಯ ಭಾಗದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಸ್ಥಿರತೆ ಕಾಣಬಹುದು. ಇಲ್ಲಿ ಇವುಗಳ ಸಂಖ್ಯೆ 8,071ರಿಂದ (2018ರಲ್ಲಿ) 8,820ಕ್ಕೆ (2022) ಹೆಚ್ಚಳವಾಗಿದೆ. ಅದೇ, ಶಿವಾಲಿಕ್‌ ಪರ್ವತ ಪ್ರದೇಶ ಹಾಗೂ ಸಿಂಧು–ಗಂಗಾ ಬಯಲು ಪ್ರದೇಶದಲ್ಲಿ ಇಳಿಕೆ ಕಂಡುಬಂದಿದೆ. ಈ ಪ್ರದೇಶಗಳಲ್ಲಿ 2018ರಲ್ಲಿ 1,253 ಚಿರತೆಗಳಿದ್ದವು. 2022ರಲ್ಲಿ ಇವುಗಳ ಸಂಖ್ಯೆ 1,109ಕ್ಕೆ ಇಳಿದಿದೆ’ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಚಿರತೆಗಳ ಸಂಖ್ಯೆ ಗಣತಿ ಮಾಡುವ ಸಂಬಂಧ ದೇಶದಾದ್ಯಂತ 2018 ಹಾಗೂ 2022ರಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ದೇಶದಾದ್ಯಂತ ಇವುಗಳ ಸಂಖ್ಯೆಯಲ್ಲಿ ವಾರ್ಷಿಕ ಶೇ 1.08ರಷ್ಟು ಹೆಚ್ಚಳ ಕಂಡುಬಂದಿದೆ. ಶಿವಾಲಿಕ್‌ ಪರ್ವತ ಪ್ರದೇಶ ಮತ್ತು ಸಿಂಧು–ಗಂಗಾ ಬಯಲು ಪ್ರದೇಶದಲ್ಲಿ ಇವುಗಳ ಸಂಖ್ಯೆಯಲ್ಲಿ ವಾರ್ಷಿಕ ಶೇ 3.4ರಷ್ಟು ಇಳಿಕೆ ಕಂಡುಬಂದಿದೆ. ಇನ್ನು, ದೇಶದ ಕೇಂದ್ರೀಯ ಭಾಗ ಮತ್ತು ಪೂರ್ವ ಘಟ್ಟ ಪ್ರದೇಶಗಳಲ್ಲಿ ವಾರ್ಷಿಕ ಶೇ 1.5ರಷ್ಟು ಏರಿಕೆ ದಾಖಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಆಂಧ್ರಪ್ರದೇಶ ಶ್ರೀಶೈಲಂ ಬಳಿಯ ನಾಗಾರ್ಜುನಸಾಗರ, ಮಧ್ಯಪ್ರದೇಶದ ಪನ್ನಾ ಹಾಗೂ ಸಾತ್ಪುರದಲ್ಲಿರುವ ಹುಲಿ ಸಂರಕ್ಷಿತಾರಣ್ಯದಲ್ಲಿ ಗರಿಷ್ಠ ಸಂಖ್ಯೆ ಚಿರತೆಗಳಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.