ADVERTISEMENT

ಸೇನೆಗೆ ಶೀಘ್ರವೇ ಅಗ್ನಿ–5 ಕ್ಷಿಪಣಿಗಳು ಸೇರ್ಪಡೆ

ರಕ್ಷಣಾ ವ್ಯವಸ್ಥೆ ಬಲವರ್ಧನೆಗೆ ಕ್ರಮ * ಹಸ್ತಾಂತರ ಪ್ರಕ್ರಿಯೆಗೆ ಚಾಲನೆ

ಪಿಟಿಐ
Published 1 ಜುಲೈ 2018, 15:55 IST
Last Updated 1 ಜುಲೈ 2018, 15:55 IST

ನವದೆಹಲಿ : ಅಗ್ನಿ–5 ಗುರುತ್ವಬಲ ಮತ್ತು ಖಂಡಾಂತರ ಕ್ಷಿಪಣಿಯನ್ನು ಸೇನೆಗೆ ನಿಯೋಜಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಏಷ್ಯಾದ ಎಲ್ಲಾ ಪ್ರಮುಖ ಪ್ರದೇಶಗಳು ಮತ್ತು ಯೂರೋಪ್‌ನ ಕೆಲವು ಮೇಲೆ ದಾಳಿ ನಡೆಸುವ ಸಾಮರ್ಥ್ಯವಿರುವ ಅಗ್ನಿ–5, ಅಣ್ವಸ್ತ್ರ ಸಿಡಿತಲೆಯನ್ನೂ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಸದ್ಯ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಉತ್ತರ ಕೊರಿಯಾಗಳ ಬಳಿ ಮಾತ್ರ ಖಂಡಾಂತರ ಕ್ಷಿಪಣಿಗಳಿವೆ. ಅಗ್ನಿ–5 ಸೇನೆಗೆ ಹಸ್ತಾಂತರವಾದರೆ ಈ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಲಿದೆ.

‘ಮೊದಲ ಬ್ಯಾಚ್‌ನ ಕ್ಷಿಪಣಿಗಳನ್ನು ಶೀಘ್ರವೇ ಎಸ್‌ಎಫ್‌ಸಿಗೆ (ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್– ಕ್ಷಿಪಣಿಗಳ ನಿರ್ವಹಣೆ ಮಾಡುವ, ಮೂರೂ ಸೇನಾ ಪಡೆಗಳ ಅಂಗ) ಹಸ್ತಾಂತರಿಸಲಾಗುತ್ತದೆ.ಈ ಕ್ಷಿಪಣಿ ಸೇನೆಗೆ ಹಸ್ತಾಂತರವಾದರೆ, ದೇಶದ ಸೇನಾ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಲಿದೆ’ ಎಂದು ಅಗ್ನಿ–5 ಅಭಿವೃದ್ಧಿ ಯೋಜನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‘ಅಭಿವೃದ್ಧಿ ಹಂತದಲ್ಲಿ ನಡೆಸಲಾದ ಐದೂ ಪರೀಕ್ಷೆಗಳನ್ನು ಅಗ್ನಿ–5 ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಎಸ್‌ಎಫ್‌ಸಿಗೆ ಕ್ಷಿಪಣಿಗಳನ್ನು ಹಸ್ತಾಂತರಿಸುವುದಕ್ಕೂ ಮೊದಲು ಇನ್ನೂ ಹಲವು ಸುತ್ತಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಹುಶಃ ಮುಂದಿನ ನಾಲ್ಕೈದು ವಾರಗಳಲ್ಲಿ ಈ ಪರೀಕ್ಷೆಗಳೆಲ್ಲಾ ಪೂರ್ಣಗೊಳ್ಳಲಿವೆ’ ಎಂದು ಅವರು ಹೇಳಿದ್ದಾರೆ.

ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಸಂದರ್ಭದಲ್ಲೇ ಈ ಕ್ಷಿಪಣಿಗಳನ್ನು ಸೇನೆಗೆ ಹಸ್ತಾಂತರಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಅದರ ಜತೆಯಲ್ಲೇ ಸೇನೆಯನ್ನು ಬಲಪಡಿಸುವ ಮತ್ತಷ್ಟು ಕ್ರಮಗಳಿಗೆ ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಆ ಕ್ರಮಗಳೇನು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

ಸುಖೋಯ್‌ಗೆ ಬ್ರಹ್ಮೋಸ್ ಅಳವಡಿಕೆ:ಜಗತ್ತಿನ ಅತ್ಯಂತ ವೇಗದ ಕ್ರೂಸ್ (ಗುರಿ ಮುಟ್ಟುವವರೆಗೂ ಎಂಜಿನ್‌ನ ಶಕ್ತಿಯಿಂದಲೇ ಚಲಿಸುವ) ಕ್ಷಿಪಣಿ ಬ್ರಹ್ಮೋಸ್‌ ಅನ್ನು ಸುಖೋಯ್‌–30 ಯುದ್ಧವಿಮಾನಗಳಿಗೆ ಅಳವಡಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 40 ವಿಮಾನಗಳಲ್ಲಿ ಈ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ. ಕ್ಷಿಪಣಿಅಳವಡಿಕೆಗೆ ಅನುಕೂಲವಾಗುವಂತೆ ವಿಮಾನಗಳನ್ನು ಎಚ್‌ಎಎಲ್ ಮಾರ್ಪಡಿಸಲಿದೆ.

ಸುಖೋಯ್ ಯುದ್ಧವಿಮಾನಗಳಿಂದ ಬ್ರಹ್ಮೋಸ್‌ ಅನ್ನು ಉಡಾಯಿಸುವ ಪರೀಕ್ಷೆಯನ್ನು ಈಚೆಗೆ ಯಶಸ್ವಿಯಾಗಿ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.