ADVERTISEMENT

ಇರಾನ್‌ನಿಂದ ತೈಲ ಖರೀದಿಗೆ ತಡೆ ಮುಖ್ಯ ಚರ್ಚೆ

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಜತೆಗೆ ಜೈಶಂಕರ್‌ ಮಾತುಕತೆ ಇಂದು

ಪಿಟಿಐ
Published 25 ಜೂನ್ 2019, 20:00 IST
Last Updated 25 ಜೂನ್ 2019, 20:00 IST
ಮೈಕ್‌
ಮೈಕ್‌   

ನವದೆಹಲಿ (ಪಿಟಿಐ): ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರ ಭೇಟಿಯ ಸಂದರ್ಭದಲ್ಲಿ ಉಗ್ರವಾದ, ಎಚ್‌1ಬಿ ವೀಸಾ ಸಮಸ್ಯೆಗಳು, ಇರಾನ್‌ನಿಂದ ತೈಲ ಖರೀದಿ ಮೇಲೆ ಅಮೆರಿಕದ ನಿರ್ಬಂಧದಿಂದ ಆಗಿರುವ ಪರಿಣಾಮಗಳು ಮುಂತಾದ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ಹೇಳಿವೆ.

ವಿದೇಶಾಂಗ ಸಚಿವೆ ಎಸ್‌. ಜೈಶಂಕರ್‌ ಅವರು ಪಾಂಪಿಯೊ ಜತೆಗೆ ಬುಧವಾರ ಮಾತುಕತೆ ನಡೆಸಲಿದ್ದಾರೆ.ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಮುಖ ರಾಜಕೀಯ ನಾಯಕ ಪಾಂಪಿಯೊ.ಇದೇ 28–29ರಂದು ಜಪಾನ್‌ನ ಒಸಾಕಾದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಭೇಟಿಯಾಗಲಿದ್ದಾರೆ. ಅದಕ್ಕೂ ಮೊದಲು ಜೈಶಂಕರ್‌ ಮತ್ತು ಪಾಂಪಿಯೊ ಮಾತುಕತೆ ನಡೆಯಲಿದೆ.ಪಾಂಪಿಯೊ ಅವರು ಮೋದಿ ಅವರನ್ನೂ ಭೇಟಿಯಾಗಲಿದ್ದಾರೆ.

ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪಾಂಪಿಯೊ ಅವರ ಜತೆಗಿನ ಚರ್ಚೆಯ ಸಂದರ್ಭದಲ್ಲಿ ಪ್ರಯತ್ನಿಸಲಾಗುವುದು ಎಂದು ಜೈಶಂಕರ್‌ ಹೇಳಿದ್ದಾರೆ.ವಿದೇಶಾಂಗ ಸಚಿವರ ಮಾತುಕತೆಗೆ ನಿರ್ದಿಷ್ಟ ಕಾರ್ಯಸೂಚಿ ಇಲ್ಲ. ದ್ವಿಪಕ್ಷೀಯ ಸಂಬಂಧದ ಎಲ್ಲ ಮಹತ್ವದ ವಿಚಾರಗಳೂ ಚರ್ಚೆಗೆ ಬರಲಿವೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ADVERTISEMENT

ಇರಾನ್‌ನಿಂದ ಭಾರತವು ತೈಲ ಖರೀದಿ ಮಾಡುವುದಕ್ಕೆ ಇದ್ದ ವಿನಾಯಿತಿಯನ್ನು ಅಮೆರಿಕ ರದ್ದು ಮಾಡಿದೆ. ಇದರಿಂದಾಗಿ ಭಾರತವು ಈಗ ಇರಾನ್‌ ನಿಂದ ತೈಲ ಖರೀದಿಸುವುದು ಸಾಧ್ಯವಾಗುತ್ತಿಲ್ಲ. ಭಾರತದ ಇಂಧನ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ಈ ವಿಚಾರದಲ್ಲಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಎರಡೂ ದೇಶಗಳಿಗೆ ಹಿತಾಸಕ್ತಿಗಳಿವೆ. ರಾಜತಾಂತ್ರಿಕತೆಯ ಮೂಲಕ ಸಮಾನ ನೆಲೆಯೊಂದನ್ನು ಕಂಡುಕೊಳ್ಳಲು ಯತ್ನಿಸಲಾಗುವುದು
– ಎಸ್‌. ಜೈಶಂಕರ್‌, ವಿದೇಶಾಂಗ ಕಾರ್ಯದರ್ಶಿ

***

ಎಚ್‌1ಬಿ ವೀಸಾ ನಿಯಂತ್ರಣ ಇಲ್ಲ?

ಗಡಿಯಾಚೆಗಿನ ಭಯೋತ್ಪಾದನೆ ಸೇರಿ ಎಲ್ಲ ರೀತಿಯ ಉಗ್ರವಾದದ ದಮನ ವಿದೇಶಾಂಗ ಸಚಿವರ ಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗಲಿದೆ. ಭಾರತಕ್ಕೆ ಮುಖ್ಯವಾಗಿರುವ ಇನ್ನೊಂದು ವಿಚಾರ ಎಚ್‌1 ಬಿ ವೀಸಾ. ಭಾರಿ ಬೇಡಿಕೆ ಇರುವ ಈ ವೀಸಾ ನೀಡಿಕೆಗೆ ನಿಯಂತ್ರಣ ಹೇರುವುದಿಲ್ಲ ಎಂಬ ಭರವಸೆಯನ್ನು ಪಾಂಪಿಯೊ ಅವರು ಕೊಡಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಮಾಹಿತಿ ತಂತ್ರಜ್ಞಾನ ವೃತ್ತಿಪರರಲ್ಲಿ ಎಚ್‌1 ಬಿ ವೀಸಾಕ್ಕೆ ಹೆಚ್ಚು ಬೇಡಿಕೆ ಇದೆ. ಇದು ವಲಸೆ ವೀಸಾ ಅಲ್ಲ. ಆದರೆ, ಈ ವೀಸಾದ ಮೂಲಕ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ನೆಲೆಸಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ.

ರಷ್ಯಾ ಜತೆಗಿನ ಒಪ್ಪಂದಕ್ಕೆ ವಿನಾಯಿತಿ ಸಾಧ್ಯತೆ

ಅಮೆರಿಕದ ಎದುರಾಳಿಗಳಿಂದ ದೊಡ್ಡ ಮೊತ್ತದ ಸೇನಾ ಸಲಕರಣೆಗಳನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧ ಹೇರುವ ಕಾಯ್ದೆಯನ್ನು ಅಮೆರಿಕದ ಸೆನೆಟ್‌ ಕಳೆದ ವರ್ಷ ಅಂಗೀಕರಿಸಿದೆ. ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾದಿಂದ ಸೇನಾ ಸಲಕರಣೆ ಖರೀದಿಗೆ ಇದು ಅನ್ವಯ ಆಗುತ್ತದೆ. ರಷ್ಯಾದಿಂದ ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಈಗಾಗಲೇ ಸಹಿ ಹಾಕಿದೆ. ಇದು ಸುಮಾರು ₹39 ಸಾವಿರ ಕೋಟಿ ಮೊತ್ತದ ಒಪ್ಪಂದ.

ಈ ಒಪ್ಪಂದವನ್ನು ರದ್ದು ಮಾಡುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ. ಆದರೆ, ಈ ಒಪ್ಪಂದಕ್ಕೆ ನಿರ್ಬಂಧದಿಂದ ವಿನಾಯಿತಿ ನೀಡಬೇಕು ಎಂದು ಭಾರತ ಆಗ್ರಹಿಸುತ್ತಿದೆ.

ಒಪ್ಪಂದಕ್ಕೆ ವಿನಾಯಿತಿ ಕೊಡಬೇಕು ಎಂಬ ವಿಚಾರದಲ್ಲಿ ಅಮೆರಿಕದ ಮನವೊಲಿಸಲು ಜೈಶಂಕರ್‌ ಅವರು ಯತ್ನಿಸಲಿದ್ದಾರೆ. ವಿನಾಯಿತಿ ನೀಡಲು ಬೇಕಾದ ಎಲ್ಲ ಅಗತ್ಯಗಳನ್ನೂ ಭಾರತ ಪೂರೈಸಿದೆ. ಹಾಗಾಗಿ ವಿನಾಯಿತಿ ನೀಡಬೇಕು ಎಂಬ ವಾದವನ್ನು ಭಾರತ ಮುಂದಿಡಲಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.

ಭಾರತದಂತಹ ಪಾಲುದಾರ ದೇಶಗಳ ಹಿತಾಸಕ್ತಿ ರಕ್ಷಣೆಗಾಗಿ ಅಮೆರಿಕದ ಸಂಸತ್ತು ಕಾನೂನು ಒಂದನ್ನು ರೂಪಿಸಿದೆ. ಈ ಕಾಯ್ದೆಯ ಮೂಲಕ ಭಾರತಕ್ಕೆ ವಿನಾಯಿತಿ ನೀಡಲು ಅವಕಾಶ ಇದೆ. ಆದರೆ, ಇದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇನ್ನೂ ಸಹಿ ಹಾಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.